ತಾರಕಕ್ಕೇರಿದ ಕಾಂಗ್ರೆಸ್- ಬಿಜೆಪಿ ಟ್ವೀಟ್ ಸಮರ

Update: 2017-10-22 04:03 GMT

ಹೊಸದಿಲ್ಲಿ, ಅ.22: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ತಮ್ಮ ಟ್ವೀಟ್ ಜನಪ್ರಿಯಗೊಳಿಸಲು ಬಾಟ್ (ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಕಂಪ್ಯೂಟರ್ ಪ್ರೋಗ್ರಾಂ) ಬಳಸುತ್ತಾರೆ ಎಂಬ ಆರೋಪದಲ್ಲಿ ಅವರ ವಿರುದ್ಧ ಟ್ವಿಟ್ಟರ್ ಸಮರಕ್ಕೆ ಬಿಜೆಪಿ ಮುಂದಾಗಿದೆ. ಈ ಮಧ್ಯೆ ಕಾಂಗ್ರೆಸ್ ಯುವರಾಜ ಮೋದಿ ಸರ್ಕಾರದ ಮೇಲೆ ಟ್ವೀಟ್ ದಾಳಿ ನಡೆಸಿದ್ದು, ಸರಕು ಮತ್ತು ಸೇವಾ ತೆರಿಗೆ, ಡಿಜಿಟಲ್ ಇಂಡಿಯಾ ಅಭಿಯಾನವನ್ನು ಅವಹೇಳನ ಮಾಡುವ 'ಮೆರ್ಸಾಲ್' ತಮಿಳು ಚಿತ್ರವನ್ನು ಸಮರ್ಥಿಸಿಕೊಂಡಿದ್ದಾರೆ.

ಚಿತ್ರದ ಕೆಲ ದೃಶ್ಯಗಳನ್ನು ವಿರೋಧಿಸಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್, "ಮಿಸ್ಟರ್ ಮೋದಿ, ಸಿನಿಮಾ ತಮಿಳು ಸಂಸ್ಕೃತಿ ಮತ್ತು ಭಾಷೆಯ ಆಳವಾದ ಅಭಿವ್ಯಕ್ತಿ. ತಮಿಳರ ಸ್ವಾಭಿಮಾನಕ್ಕೆ ಪೆಟ್ಟಾಗುವ ರೀತಿಯಲ್ಲಿ ತಮಿಳು ಚಿತ್ರ ಮಾರ್ಸೆಲ್‌ನಲ್ಲಿ ಹಸ್ತಕ್ಷೇಪ ಮಾಡಬೇಡಿ" ಎಂದು ಟ್ವೀಟ್ ಮಾಡಿದ್ದಾರೆ.

ಈ ಚಿತ್ರದಲ್ಲಿ ತಮಿಳುನಟ ವಿಜಯ್, ಹೊಸ ತೆರಿಗೆ ವ್ಯವಸ್ಥೆ ಮತ್ತು ಡಿಜಿಟಲ್ ಇಂಡಿಯಾ ಅಭಿಯಾನವನ್ನು ಅಣಕಿಸುವ ದೃಶ್ಯ ಇದೆ. ತಪ್ಪು ಕಲ್ಪನೆ ಮೂಡಿಸುವ ಎಲ್ಲ ದೃಶ್ಯಾವಳಿಯನ್ನು ತಕ್ಷಣ ಕಿತ್ತು ಹಾಕಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಟಿ.ಎನ್.ಸೌಂದರ್‌ರಾಜನ್ ಆಗ್ರಹಿಸಿದ್ದಾರೆ.

ದಿಲ್ಲಿಯ ಉಪಮುಖ್ಯಮಂಯತ್ರಿ ಮನೀಶ್ ಸಿಸೋಡಿಯಾ ಕೂಡಾ ಬಿಜೆಪಿ ವಿರುದ್ಧ ಟ್ವೀಟ್ ದಾಳಿ ನಡೆಸಿದ್ದು, "ಒಪ್ಪಿಕೊಳ್ಳಿ! ಚಿತ್ರಕ್ಕೆ ಸೆನ್ಸಾರ್ ಹಾಕುವ ಬದಲು ಜಿಎಸ್‌ಟಿ ಸಮಸ್ಯೆ ನಿವಾರಿಸಿ" ಎಂದು ಆಗ್ರಹಿಸಿದ್ದಾರೆ.

ಈ ಮಧ್ಯೆ ತಮ್ಮ ಟ್ವೀಟ್ ಜನಪ್ರಿಯಗೊಳಿಸಲು ರಾಹುಲ್ ಬಾಟ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪದಲ್ಲಿ ಬಿಜೆಪಿ, ರಾಹುಲ್ ಮೇಲೆ ದಾಳಿ ಮುಂದುವರಿಸಿದೆ. ಆದರೆ ಈ ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದೆ.

"ಬಹುಶಃ ರಾಹುಲ್‌ ಗಾಂಧಿಯವರ ಕಚೇರಿ ರಷ್ಯಾ, ಇಂಡೋನೇಷ್ಯಾ ಮತ್ತು ಕಝಕಿಸ್ತಾನ ಚುನಾವಣೆಯಲ್ಲಿ ಜಯಭೇರಿ ಸಾಧಿಸಲು ಹೊರಟಿದೆಯೇ? ಹಲವು ಬಾಟ್‌ಗಳು ರಷ್ಯನ್, ಕಝಕ್ ಮತ್ತು ಇಂಡೋನೇಷ್ಯಾ ಲಕ್ಷಣಗಳನ್ನು ಒಳಗೊಂಡಿದೆ" ಎಂದು ಮಾಹಿತಿ ಪ್ರಸಾರ ಖಾತೆ ಸಚಿವೆ ಸ್ಮತಿ ಇರಾನಿ ಟ್ವೀಟಿಸಿದ್ದಾರೆ.

"ಕ್ರೀಡೆಯಲ್ಲಿ ಇದು ಡೋಪಿಂಗ್ ಎನಿಸಿಕೊಳ್ಳುತ್ತದೆ... ಹೇ ತಾಳಿ... ಡೋಪ್ ನಿಮಗೆ ಕೆಲವರನ್ನು ನೆಪಿಸುತ್ತದೆಯೇ" ಎಂದು ಸಚಿವ ರಾಜ್ಯವರ್ಧನ ರಾಥೋಡ್ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಟೀಕೆಗಳಿಗೆ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾದ ಪ್ರಿಯಾಂಕಾ ಚತುರ್ವೇದಿ, ಇರಾನಿಯವರ ವಿರುದ್ಧ ವಾಗ್ದಾಳಿ ನಡೆಸಿ, "ಸಚಿವರೇ ಕಳೆದ ಚುನಾವಣೆಯಲ್ಲಿ ನೀವು "ಸ್ವೀಪ್" ಮಾಡಿದ್ದನ್ನು ನೆನಪಿಸಿಕೊಳ್ಳಿ. ನೀವು ಉದ್ಯೋಗವಿಲ್ಲದೇ ಇರಲಾರಿರಿ. ಆರ್‌ಟಿ ಮತ್ತು ಅನುಯಾಯಿಗಳನ್ನು ಚೆಕ್ ಮಾಡಿ!" ಎಂದು ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News