ಶಹಾಜಹಾನ್ ಸಮಾಧಿ ಸ್ಥಳಕ್ಕೆ ಸಿಎಂ ಆದಿತ್ಯನಾಥ್ ಭೇಟಿ

Update: 2017-10-22 04:41 GMT

ಲಕ್ನೋ, ಅ.22: ಭಾರತದ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ವಿಶ್ವವಿಖ್ಯಾತ ತಾಜ್‌ಮಹಲ್‌ನ ಸ್ಥಾನದ ಬಗ್ಗೆ ಎದ್ದಿರುವ ವಿವಾದದ ನಡುವೆಯೇ ಉತ್ತರ ಪ್ರದೇಶ  ಮುಖ್ಯಮಂತ್ರಿ ಆದಿತ್ಯನಾಥ್ ಈ ತಿಂಗಳ 26ರಂದು ತಾಜ್‌ಮಹಲ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಶಹಾಜಹಾನ್ ಮತ್ತು ಮುಮ್ತಾಝ್ ಸಮಾಧಿ ಸ್ಥಳದಲ್ಲಿ ಕನಿಷ್ಠ ಅರ್ಧ ಗಂಟೆಯನ್ನು ಮುಖ್ಯಮಂತ್ರಿ ಕಳೆಯಲಿದ್ದಾರೆ. ಇದು ತಾಜ್‌ಮಹಲ್‌ಗೆ ಆದಿತ್ಯನಾಥ್ ನೀಡುತ್ತಿರುವ ಮೊಟ್ಟಮೊದಲ ಭೇಟಿಯಾಗಿದೆ.

"ಅಕ್ಟೋಬರ್ 26ರ ಆಗ್ರಾ ಭೇಟಿ ವೇಳೆ ಮುಖ್ಯಮಂತ್ರಿ ತಾಜ್‌ಮಹಲ್‌ನ ಒಳಗೆ ಎಲ್ಲ ಭಾಗಗಳನ್ನು ವೀಕ್ಷಿಸಲಿದ್ದಾರೆ" ಎಂದು ಪ್ರವಾಸೋದ್ಯಮ ಖಾತೆ ಪ್ರಧಾನ ಕಾರ್ಯದರ್ಶಿ ಅವನೀಶ್ ಅವಸ್ತಿ ಹೇಳಿದ್ದಾರೆ. ತಾಜ್‌ಗೆ ಭೇಟಿ ನೀಡುತ್ತಿರುವ ಮೊಟ್ಟಮೊದಲ ಬಿಜೆಪಿ ಸಿಎಂ ಎಂಬ ಹೆಗ್ಗಳಿಕೆಗೂ ಆದಿತ್ಯನಾಥ್  ಪಾತ್ರರಾಗಲಿದ್ದಾರೆ.

ಪ್ರಸ್ತಾವಿತ ಕಾರಿಡಾರ್ ಪ್ರದೇಶವನ್ನೂ ಮುಖ್ಯಮಂತ್ರಿ ವೀಕ್ಷಿಸಲಿದ್ದು, ಯಮುನಾ ನದಿಯಿಂದ ಸ್ಮಾರಕ ವರೆಗಿನ ಜಾಗದಲ್ಲಿ ಕಾರಿಡಾರ್ ನಿರ್ಮಿಸುವ ಯೋಜನೆ ಇದೆ.

ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಕಿರುಹೊತ್ತಿಗೆಯಲ್ಲಿ ಈ ಸ್ಮಾರಕದ ಉಲ್ಲೇಖ ಇಲ್ಲದಿರುವುದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಬಿಜೆಪಿ ಶಾಸಕ ಸಂಗೀತ್ ಸೋಮ್, ತಾಜ್‌ಮಹಲನ್ನು ಭಾರತೀಯ ಇತಿಹಾಸದ ಕಪ್ಪುಚುಕ್ಕೆ ಎಂದು ಬಣ್ಣಿಸಿದ್ದರೆ, ಸಂಸದ ವಿನಯ ಕಟಿಯಾರ್, ಇದು ಮೂಲತಃ ಶಿವ ದೇವಾಲಯ ಎಂದು ಹೇಳಿಕೆ ನೀಡಿದ್ದರು. ಈ ವಿವಾದ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಸಿಎಂ ಇಲ್ಲಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News