ಚನ್ನಗಿರಿ: ಆನೆ ತುಳಿತಕ್ಕೆ ರೈತ ಬಲಿ
Update: 2017-10-22 18:31 IST
ಚನ್ನಗಿರಿ, ಅ.22: ರೈತನೋರ್ವ ಕಾಡಾನೆ ತುಳಿತಕ್ಕೆ ಸಿಲುಕಿ ಮೃತಪಟ್ಟ ಘಟನೆ ತಾಲೂಕಿನ ಎರೇಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ರವಿವಾರ ನಡೆದಿದೆ.
ತಾಲೂಕಿನ ಎರೇಹಳ್ಳಿ ಗ್ರಾಮದ ಗಾದ್ರೆಪ್ಪ (60 ವರ್ಷ) ಆನೆ ತುಳಿತಕ್ಕೆ ಮೃತಪಟ್ಟ ರೈತ ಎಂದು ಗುರುತಿಸಲಾಗಿದೆ.
ಎರೇಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ದನ ಮೇಯಿಸಲು ಶನಿವಾರ ಗಾದ್ರೆಪ್ಪ ತೆರಳಿದ್ದರು. ಈ ವೇಳೆ ಗಾದ್ರೆಪ್ಪನವರ ಮೇಲೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದ್ದು ಪರಿಣಾಮ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕಾಡಿಗೆ ಜಾನುವಾರು ಮೇಯಿಸಲು ತೆರಳಿದ್ದ ಗಾದ್ರೆಪ್ಪ ರಾತ್ರಿಯಾದರೂ ಮನೆಗೆ ಮರಳದ ಪರಿಣಾಮ ಕುಟುಂಬಸ್ಥರು ಅರಣ್ಯ ಹೋಗಿ ಶೋಧ ನಡೆಸಿದಾಗ ಆನೆ ಕಾಲ್ತುಳಿತಕ್ಕೆ ಸಿಲುಕಿದ್ದ ಗಾದ್ರೆಪ್ಪನವರ ಮೃತ ದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಆರ್‍ಎಫ್‍ಒ ವೀರೇಶ ನಾಯ್ಕ, ಅಧಿಕಾರಿ ದಿನೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.