ವಿದ್ಯುತ್ ತಂತಿ ತಗುಲಿ ಮಹಿಳೆ ಮೃತ್ಯು
Update: 2017-10-22 21:45 IST
ಸಕಲೇಶಪುರ, ಅ.22: ವಿದ್ಯುತ್ ತಂತಿ ತಗುಲಿ ಮಹಿಳೆ ಮತ್ತು ಹಸು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಪಟ್ಟಣದ ರೈಲ್ವೆ ಸೇತುವೆ ಬಳಿಯ ಕಪ್ಪೆಹೊಂಡ ಎಂಬಲ್ಲಿ ರವಿವಾರ ನಡೆದಿದೆ.
ಬೈಕೆರೆ ಗ್ರಾಮದ ರಾಜಮ್ಮ (58) ಮೃತಪಟ್ಟಿರುವ ದುರ್ದೈವಿಯಾಗಿದ್ದು, ಕಳೆದ ಶುಕ್ರವಾರದಿಂದ ಕಾಣೆಯಾಗಿದ್ದ ರಾಜಮ್ಮನವರನ್ನು ಮನೆಯವರು ಹುಡುಕುತ್ತಿದ್ದಾಗ ಪಟ್ಟಣದ ಸಮೀಪದಲ್ಲಿರುವ ಕಪ್ಪೆ ಹೊಂಡ ಎಂಬಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ರಾಜಮ್ಮನ ದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ರಾಜಮ್ಮ ಕಳೆದ ಶುಕ್ರವಾರ ಹೊಂಡದಲ್ಲಿ ಬಿದ್ದು ಸತ್ತಿದ್ದ ಹಸುವನ್ನು ಕಂಡು ನೋಡುವ ಸಲುವಾಗಿ ಹತ್ತಿರ ಹೋದಾಗ ಅಲ್ಲೇ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಪಟ್ಟಣ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.