ರಾಜ್ಯ ಸರಕಾರ ಟಿಪ್ಪು ಜಯಂತಿಗೆ ಸಿದ್ಧತೆ ನಡೆಸಿದೆ: ಸೈಯದ್ ಅಹ್ಮದ್
ಮಂಡ್ಯ, ಅ.22: ಒಂದೆರಡು ಕಡೆ ಗದ್ದಲ ಬಿಟ್ಟರೆ, ಕಳೆದ ವರ್ಷ ಜಿಲ್ಲಾ ಕೇಂದ್ರಗಳಲ್ಲಿ ನಡೆದ ಟಿಪ್ಪುಸುಲ್ತಾನ್ ಜಯಂತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿ ರಾಜ್ಯಾಧ್ಯಕ್ಷ ವೈ.ಸೈಯದ್ ಅಹ್ಮದ್ ಹೇಳಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಾಂಗ್ರೆಸ್ ಸಮಿತಿ ರವಿವಾರ ಆಯೋಜಿಸಿದ್ದ ಅಲ್ಪಸಂಖ್ಯಾತರ ಕಾರ್ಯಕರ್ತರ ಸಭೆ ಮತ್ತು ಪದಾಧಿಕಾರಿಗಳ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ವರ್ಷವೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಟಿಪ್ಪು ಸುಲ್ತಾನ್ ಜಯಂತಿಗೆ ಮುಂದಾಗಿದೆ. ಆದರೆ, ಇದನ್ನು ತಡೆಯಲು ಬಿಜೆಪಿ ಸಲ್ಲದ ಊಹಾಪೋಹ ಸೃಷ್ಟಿಸುತ್ತಿದೆ ಎಂದರು.
ಕಳೆದ ವರ್ಷ ಒಂದೆರಡು ಕಡೆ ಉಂಟಾದ ಗದ್ದಲವನ್ನೇ ಕಾರಣವಿಟ್ಟು ಜಯಂತಿ ಆಚರಣೆಗೆ ಕೋಮುವಾದಿಗಳು ವಿವಾದಾತ್ಮಕ ಸನ್ನಿವೇಶ ಸೃಷ್ಟಿಸುವುದು ಸರಿಯಲ್ಲ. ಸರಕಾರ ಟಿಪ್ಪು ಜಯಂತಿಗೆ ಸಿದ್ಧತೆ ನಡೆಸಿದೆ ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನಾನಾ ಯೋಜನೆಗಳ ಮೂಲಕ ಸಹಕಾರ ನೀಡಿದ್ದು, ಈ ಬಗ್ಗೆ ಮತದಾರರಿಗೆ ಅರಿವು ಮೂಡಿಸಿ ಮತ್ತೆ ಸರಕಾರ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ವೇಳೆ ಜಿಲ್ಲಾ ಅಲ್ಪಸಂಖ್ಯಾತರ ಕಾಂಗ್ರೆಸ್ ಸಮಿತಿಗೆ ನೇಮಕಗೊಂಡ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಬಳಿಕ ಯುವ ಕಾಂಗ್ರೆಸ್ ಮುಂಖಡರು ಸೈಯದ್ ಅವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಮುನಾವರ್ ಖಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಸ್.ಆತ್ಮಾನಂದ, ಜಿಲ್ಲಾ ವಕ್ತಾರ ಇಷಾಕ್ ಶೇಠ್, ಮೊಹಮ್ಮದ್ ಆಲಿ, ಝಬೀ ಉಲ್ಲಾ ಖಾನ್, ಅಲ್ಪಸಂಖ್ಯಾತರ ಸಮಿತಿ ಜಿಲ್ಲಾಧ್ಯಕ್ಷ ರಫೀಉಲ್ಲಾ, ಬೇಲೂರು ಸೋಮಶೇಖರ್, ಹಾಲಹಳ್ಳಿ ಸಂಪತ್, ಇತರ ಮುಖಂಡರು ಹಾಜರಿದ್ದರು.