ಯುವಜನರು ಕೋಮುವಾದದ ಸುಳಿಯಲ್ಲಿ ಸಿಲುಕಿದ್ದಾರೆ: ಶ್ರೀಪಾದ್ ಭಟ್

Update: 2017-10-22 17:17 GMT

ತುಮಕೂರು, ಅ.22: ಇಂದಿನ ವ್ಯವಸ್ಥೆಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಗಳು ಶೋಷಿತ ಸಮುದಾಯಕ್ಕೆ ಕೈಗೆಟುಕಲಾರದ ಸ್ಥಿತಿ ನಿರ್ಮಾಣವಾಗಿದ್ದು, ಭೂಮಿ ಮತ್ತು ಸಂವಿಧಾನ ಬದ್ಧ ಹಕ್ಕುಗಳು ದೊರೆತರು ಬಡವರು ಬದುಕಲಾರದಂತಹ ವಾತವರಣ ದೇಶದಲ್ಲಿ ನಿರ್ಮಾಣವಾಗಿದೆ ಎಂದು ಹಿರಿಯ ಚಿಂತಕ ಶ್ರೀಪಾದ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಚಲಿತ ವಿದ್ಯಮಾನಗಳ ಕುರಿತು ತುಮಕೂರು ಕೊಳಗೇರಿ ಸಮಿತಿಯ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಹಮ್ಮಿಕೊಂಡಿದ್ದ ಚಿಂತನ–ಮಂಥನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಜನರು ಕೋಮುವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೆ ಗ್ರಾಮಗಳಿಂದ ನಗರಕ್ಕೆ ವಲಸೆ ಹೆಚ್ಚಿದ್ದು, ನಗರದಲ್ಲಿ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗದೆ ನಿರಾಶೆಯಲ್ಲಿ ವಂಚಿತ ಸಮುದಾಯಗಳು ಬದುಕುತ್ತಿದೆ. ಭವಿಷ್ಯದಲ್ಲಿ ಅಪಾಯದ ಸುಳಿಯಲ್ಲಿ ಸಿಲುಕುವ ಸಾಧ್ಯತೆಯೇ ಹೆಚ್ಚಾಗಿರುವುದರಿಂದ ವಂಚಿತ ಸಮುದಾಯಗಳು ಎಚ್ಚೆತ್ತು  ಘನತೆಯ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕಿದೆ ಎಂದರು.

ಬಲಪಂಥಿಯರ ಇತಿಹಾಸ ನೋಡಿದರೆ ಅವುಗಳು ಹಿಂದಿನಿಂದಲೂ ಬಹುತ್ವವನ್ನು ನಾಶಪಡಿಸಿ ಏಕತೆಯತ್ತಾ ಸಮಾಜವನ್ನು ಮುನ್ನಡೆಸಲು ಹವಣಿಸುತ್ತಿದ್ದಾರೆ. ಆದ್ದರಿಂದ ನಾವು ನಮ್ಮ ಬಹುತ್ವದ ನೆಲೆಗಟ್ಟಿನಲ್ಲಿ ಬ್ರಾಹ್ಮಣ ವರ್ಗಕ್ಕೆ ಸವಾಲು ಎಸೆಯಬೇಕಿದೆ ಎಂದು ನುಡಿದರು. 

ಸಿಐಟಿಯುನ ಜಿಲ್ಲಾಧ್ಯಕ್ಷ ಸಯೈದ್ ಮುಜೀಬ್ ಮಾತನಾಡಿ, ದಲಿತರ ಮೇಲಿನ ದೌರ್ಜನ್ಯ ಗಣನೀಯವಾಗಿ ಹೆಚ್ಚಿರುವುದನ್ನಾ ನಾವು ಕಾಣಬಹುದು. ದೇಶದಲ್ಲಿ ಸಂಪತ್ತಿನ ಅಸಮಾನತೆಯಿದ್ದು, ದೇಶದ ಶೇ.58ರಷ್ಟು ಸಂಪತ್ತು 1ರಷ್ಟು ಮೇಲು ಜಾತಿ ಜನರ ಬಳಿಯಿದೆ. ಆದರೆ ಕೇಂದ್ರ ಸರಕಾರ ಜಿಎಸ್ ಟಿ ಜಾರಿ ಮಾಡಿ ದೇಶದ ಜನರಿಗೆಲ್ಲ ಒಂದೇ ತೆರಿಗೆ ವಿಧಿಸಿರುವುದು ದುರಂತವೇ ಸರಿ ಎಂದರು.

ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಹಿಂದೂ ರಾಷ್ಟ್ರ ನಿರ್ಮಾಣದ ಸಂಕಲ್ಪ ಮೂಲ ನಿವಾಸಿಗಳ ಮೇಲೆ  ದೌರ್ಜನ್ಯವನ್ನು ಹೆಚ್ಚಾಗುವಂತೆ ಮಾಡಿದ್ದು, ಮೂಲ ನಿವಾಸಿಗಳ ಬಹುತ್ವ ಸಂಸ್ಕೃತಿಯನ್ನು ನಾಶ ಮಾಡಿ ಕೋಮುವಾದ ದತ್ತ ಸ್ಲಂ ಯುವಜನರನ್ನು ಆಮಿಷಗಳನ್ನೊಡಿ ಐಡೆಂಡಿಟಿಗಾಗಿ ಪ್ರಚೋದಿಸುತ್ತಿರುವ ಬಗ್ಗೆ ಕಾರ್ಯಕರ್ತರು ಮತ್ತು ಪಾಧಿಕಾರಿಗಳು ಗಮನಿಸಿ ಯುವಜನರು ಕೋಮುವಾದದ ಸುಳಿಯಲ್ಲಿ ಸಿಲುಕದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಶಿಬಿರದಲ್ಲಿ ಕೊಳಗೇರಿ ಸಮಿತಿಯ ಉಪಾಧ್ಯಕ್ಷೆ ದೀಪಿಕಾ, ಕಾರ್ಯದರ್ಶಿ ಶೆಟ್ಟಾಳಯ್ಯ, ಪದಾಧಿಕಾರಿಗಳಾದ ಅರುಣ್, ರಘು, ಶೃತಿ, ಗಾಯಿತ್ರಿ ಕೆಂಪೇಶ್ವರಿ ಹಾಗೂ ಕೊಳಗೇರಿಗಳ ಶಾಖಾ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News