ಕೇಂದ್ರ, ರಾಜ್ಯ ಸರಕಾರಗಳು ಬಂಡವಾಳ ಶಾಹಿಗಳ ಪರ: ಸೋಮ ಶೇಖರ್

Update: 2017-10-22 17:45 GMT

ದಾವಣಗೆರೆ, ಅ.22: ಕಾರ್ಮಿಕರ ಕಲ್ಯಾಣಕ್ಕಾಗಿ ಯಾವುದೇ ಸರಕಾರವು ಮುಂದಾಗುತ್ತಿಲ್ಲ. ಅಲ್ಲದೇ, ಬಂಡವಾಳ ಶಾಹಿಗಳು, ಮಾಲಕರ ಪರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಎಐಯುಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಸೋಮಶೇಖರ್ ಆರೋಪಿಸಿದ್ದಾರೆ.

ನಗರದ ರೋಟರಿ ಬಾಲಭವನದಲ್ಲಿ ರವಿವಾರ ಎಐಯುಟಿಯುಸಿ ವತಿಯಿಂದ ಆಯೋಜಿಸಲಾಗಿದ್ದ ದಾವಣಗೆರೆ ವಿವಿ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ರೀತಿಯಲ್ಲಿ ಕಾರ್ಮಿಕರನ್ನು ಶೋಷಣೆ ಜೊತೆಗೆ ಕಾನೂನುಗಳನ್ನು ಸಹ ಬದಲಾವಣೆ ಮಾಡಲಾಗುತ್ತಿದೆ ಎಂದು ದೂರಿದರು.

ಖಾಯಂ ಸೇವಾ ನೌಕರರರಿಗೆ ಸಿಗುವ ಸೌಲಭ್ಯಗಳು ಗುತ್ತಿಗೆ ನೌಕರರಿಗೂ ಸಿಗುವಂತಾಗಬೇಕು. ಆದರೆ, ಸೌಲಭ್ಯ ನೀಡದೆ ವಂಚಿಸುತ್ತಿದ್ದಾರೆ. ಈ ರೀತಿ ವ್ಯವಸ್ಥೆ ಇಡೀ ದೇಶದಲ್ಲಿಯೇ ನಡೆಯುತ್ತಿದ್ದು, ಕಾರ್ಮಿಕರು ಅಭದ್ರತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಖಾಯಂ ನೌಕರರ ಸಂಖ್ಯೆ ವಿರಳವಾಗುತ್ತಿದ್ದು, ನೌಕರರ ಹಕ್ಕುಗಳನ್ನು ರಕ್ಷಣೆ ಮಾಡಬೇಕಾದ ಸರಕಾರವೇ ಕಾನೂನು ಉಲ್ಲಂಘಿಸುತ್ತಿದೆ. ನೌಕರರ ಸೇವೆಗೆ ಬೆಲೆಯೇ ಇಲ್ಲದೆ, ಗುಲಾಮಗಿರಿ ಮಾಡಲಾಗುತ್ತಿದೆ. ಇದನ್ನು ಕಾರ್ಮಿಕರು ಅರ್ಥ ಮಾಡಿಕೊಂಡು ಸಮಸ್ಯೆಗಳ ಬಗೆ ಹರಿಸಲು ಒತ್ತಾಯಿಸಿ ಹೋರಾಟ ನಡೆಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಮಿಕರು ನ್ಯಾಯಕ್ಕಾಗಿ ಸಂಘಟಕರಾಗುವ ಆವಶ್ಯಕತೆ ದೆ. ಕಾರ್ಮಿಕರಿಗೆ ಇಎಸ್‌ಐ, ಪಿಎಫ್, ರಜೆ ಸೌಲಭ್ಯಗಳನ್ನು ನೀಡಬೇಕೆಂದು ಕಾನೂನಿನಲ್ಲಿ ಇದೆ. ಆದರೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾನೂನು ಉಲ್ಲಂಘನೆ ಮಾಡಿ, ಕಾರ್ಮಿಕರ ಹೆಸರಿನಲ್ಲಿ ಸವಲತ್ತುಗಳನ್ನು ಲೂಟಿ ಮಾಡುತ್ತಿದ್ದಾರೆ. ಆದ್ದರಿಂದ ಯಾವುದೇ ಒಬ್ಬ ಕಾರ್ಮಿಕರಿಗೂ ಅನ್ಯಾಯವಾದಲ್ಲಿ ಎಲ್ಲರು ಒಗ್ಗಟ್ಟಿನಿಂದ ಹೋರಾಡಬೇಕು ಎಂದರು.

ದಾವಣಗೆರೆ ವಿವಿಯ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘದ ಗೌರವ ಅಧ್ಯಕ್ಷ ಮಂಜುನಾಥ್ ಕೈದಾಳ್ ಮಾತನಾಡಿ, ಹೋರಾಟದ ಫಲವಾಗಿ ಕನಿಷ್ಠ ವೇತನ ದೊರೆಯುತ್ತಿದೆ. ವಿವಿ ಹೊರಗುತ್ತಿಗೆ ನೌಕರರ ಸಂಘದೊಂದಿಗೆ ಎಐಯುಟಿಯುಸಿ ಸಂಘಟನೆಯ ಮುಖೇನಾ ವಿವಿ ಆವರಣದಲ್ಲಿ ಅನಿರ್ಧಿಷ್ಟ ಹೋರಾಟದಲ್ಲಿ ಮಹಿಳೆಯರು ಭಾಗವಹಿಸಿದ್ದು, ಹೋರಾಟಕ್ಕೆ ಜಯ ಸಿಕ್ಕಿದೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟದ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನ ಮಾಡೋಣವೆಂದರು.

ಕಾರ್ಯಕ್ರಮದಲ್ಲಿ ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಎಂ.ಎನ್.ಶ್ರೀರಾಮ್, ಮಂಜುನಾಥ್ ಕುಕ್ಕವಾಡ, ಎಲ್.ಎಚ್.ಪ್ರಕಾಶ್, ಆರ್.ತಿಪ್ಪೇಶ್, ರುದ್ರೇಶ್, ಸಣ್ಣಕೊಟ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News