ಸಾಕ್ಷ್ಯನಾಶಗೈದ ಪೊಲೀಸರು, ವೈದ್ಯರು ಮತ್ತೆ ಸೇವೆಯಲ್ಲಿರಬಾರದು: ಸುಪ್ರೀಂ ಕೋರ್ಟ್

Update: 2017-10-23 10:22 GMT
ಬಿಲ್ಕೀಸ್ ಬಾನು

ಹೊಸದಿಲ್ಲಿ, ಅ. 23: ಸಾಕಷ್ಟು ಸುದ್ದಿಗೆ ಗ್ರಾಸವಾಗಿರುವ 2002ರ ಬಿಲ್ಕೀಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ತಿರುಚಿದ್ದಕ್ಕಾಗಿ ಶಿಕ್ಷೆ ಅನುಭವಿಸಿದ್ದ ಪೊಲೀಸರು ಹಾಗೂ ವೈದ್ಯರನ್ನು ಸೇವೆಯಲ್ಲಿ ಮುಂದುವರಿಸಬಾರದೆಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆಯಲ್ಲದೆ, ಈ ನಿಟ್ಟಿನಲ್ಲಿ ತನ್ನ ನಿಲುವನ್ನು ಸ್ಪಷ್ಟ ಪಡಿಸಲು ಗುಜರಾತ್ ಸರಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ಒದಗಿಸಿದೆ.

ಪ್ರಕರಣದ ಸಾಕ್ಷ್ಯಗಳನ್ನು ನಾಶ ಪಡಿಸಿದ್ದ ಪೊಲೀಸ್ ಸಿಬ್ಬಂದಿ ಮತ್ತೆ ಸೇವೆಗೆ ಹಾಜರಾಗಿದ್ದಾರೆಂದು ಬಿಲ್ಕೀಸ್ ಬಾನು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ ನಂತರ ಮೇಲಿನ ನಿರ್ದೇಶನ ಬಂದಿದೆ. ತನಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಬಿಲ್ಕೀಸ್ ಬಾನು ಈಗಾಗಲೇ ಅಪೀಲು ಸಲ್ಲಿಸಿದ್ದಾರೆ.

ಸಾಕ್ಷ್ಯ ನಾಶಪಡಿಸಿದ್ದ ಐವರು ಪೊಲೀಸ್ ಸಿಬ್ಬಂದಿ ಹಾಗೂ ಇಬ್ಬರು ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆಯೇ ಎಂದು ಸುಪ್ರೀಂ ಕೋರ್ಟ್ ಗುಜರಾತ್ ಸರಕಾರವನ್ನು ಪ್ರಶ್ನಿಸಿದೆ. ಈ ಏಳು ಮಂದಿಯ ವಿರುದ್ಧದ ಆರೋಪವು ಸಾಬೀತಾಗಿ ಅವರನ್ನು ತಪ್ಪಿತಸ್ಥರೆಂದು ಬಾಂಬೆ ಹೈಕೋರ್ಟ್ ಈ ಹಿಂದೆಯೇ ಘೋಷಿಸಿತ್ತು.

ಅವರೆಲ್ಲಾ ತಮ್ಮ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದ್ದಾರೆಂದು ಸರಕಾರ ತಿಳಿಸಿದರೂ ಅವರನ್ನು ಮತ್ತೆ ಅವರ ಹಿಂದಿನ ಹುದ್ದೆಯಲ್ಲಿ ಕೂರಿಸಿರುವ ಬಗ್ಗೆ ನ್ಯಾಯಾಲಯ ಸರಕಾರವನ್ನು ಪ್ರಶ್ನಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚುವರಿ ಪರಿಹಾರಕ್ಕೆ ಆಗ್ರಹಿಸಿದ್ದ ಬಿಲ್ಕೀಸ್ ಬಾನುರಿಗೆ ಕೆಳಗಿನ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಲು ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಪ್ರಕರಣದ ಎಲ್ಲಾ ತಪ್ಪಿತಸ್ಥರ ಮೇಲೂ ತಲಾ 55,000 ರೂ. ದಂಡ ವಿಧಿಸಿದ್ದ ನ್ಯಾಯಾಲಯ ಈ ಹಣವನ್ನು ಬಾನುರಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಹೇಳಿತ್ತು.

2002ರ ಮಾರ್ಚ್ 3ರಂದು ಮತೀಯ ಹಿಂಸಾಚಾರ ನಡೆದ ಸಂದರ್ಭ ಗುಜರಾತ್ ರಾಜ್ಯದ ದಹೋದ್ ಜಿಲ್ಲೆಯ ರಂಧಿಕ್ಪುರ್ ಎಂಬ ಗ್ರಾಮದಲ್ಲಿ ಬಾನು ಮತ್ತು  ಆಕೆಯ 16 ಮಂದಿ ಕುಟುಂಬ ಸದಸ್ಯರ ಮೇಲೆ ಗುಂಪೊಂದು ದಾಳಿ ನಡೆಸಿ ಏಳು ಜನರನ್ನು ಸಾಯಿಸಿತ್ತು. ಆಗ ಐದು ತಿಂಗಳ ಗರ್ಭಿಣಿಯಾಗಿದ್ದ 19 ವರ್ಷದ ಬಾನುರನ್ನು  ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ದಾಳಿಯ ಸಂದರ್ಭ ಆಕೆಯ ಕುಟುಂಬದ ಆರು ಸದಸ್ಯರು ಪರಾರಿಯಾಗಲು ಯಶಸ್ವಿಯಾಗಿದ್ದರು.

ಪ್ರಕರಣದಲ್ಲಿ 11 ಜನ ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ಮೇ 4, 2017ರಂದು ಹೈ ಕೋರ್ಟ್ ಖಾಯಂಗೊಳಿಸಿತ್ತು. ಇತರ ಏಳು ಮಂದಿಯನ್ನು ಸಾಕ್ಷ್ಯ ನಾಶಪಡಿಸಿದ ಪ್ರಕರಣದಲ್ಲಿ ದೋಷಿಗಳೆಂದು ಘೋಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News