×
Ad

ಮಡಿಕೇರಿ : ಚಂದ್ರಕಲಾ ವಿರುದ್ಧ ನಗರ ಬಿಜೆಪಿ ಅಸಮಾಧಾನ

Update: 2017-10-23 18:32 IST
ಮಹೇಶ್ ಜೈನಿ

ಮಡಿಕೇರಿ, ಅ.23 : ರಾಜ್ಯ ಸರ್ಕಾರ ಘೋಷಿಸಿರುವ ಟಿಪ್ಪು ಜಯಂತಿ ಆಚರಣೆಯ ನೇತೃತ್ವವನ್ನು ವಹಿಸಿರುವ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಟಿಪ್ಪು ಜಯಂತಿ ವಿರುದ್ಧ ತೆಗೆದುಕೊಂಡಿರುವ ನಿರ್ಣಯವನ್ನು ನಗರ ಬಿ.ಜೆ.ಪಿ. ಸ್ವಾಗತಿಸುತ್ತದೆ ಎಂದು ಬಿಜೆಪಿ ನಗರಾಧ್ಯಕ್ಷರಾದ ಮಹೇಶ್ ಜೈನಿ ತಿಳಿಸಿದ್ದಾರೆ. 

ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಡಗಿನ ಜನತೆಗೆ ಬೇಡವಾಗಿರುವ ಈ ಜಯಂತಿಯನ್ನು ಸರ್ಕಾರ ಕಳೆದೆರಡು ವರ್ಷಗಳಿಂದ ಆಚರಿಸುತ್ತಾ ಬರುತ್ತಿದ್ದು, ಈ ಆಚರಣೆಯಿಂದ ಕೊಡಗಿನ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ದಕ್ಕೆ ಉಂಟಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಜ್ಞಾವಂತ ಅಲ್ಪಸಂಖ್ಯಾತರು ಟಿಪ್ಪು ಜಯಂತಿಗೆ ವಿರೋಧವನ್ನು ವ್ಯಕ್ತಪಡಿಸುತ್ತಾ ಬಂದಿದ್ದು, ಕೊಡಗಿನಲ್ಲಿ ಪಕ್ಷ ಭೇದ ಮರೆತು ಶಾಂತಿಯ ವಾತವರಣ ಬಯಸುವ ಪ್ರತಿಯೊಬ್ಬರು ಜಯಂತಿಯನ್ನು ವಿರೋಧಿಸಿದ್ದಾರೆ. ಆದರೆ ಟಿಪ್ಪು ಜಯಂತಿಯ ಪರ ಹೇಳಿಕೆ ನೀಡಿರುವ ಜಿ.ಪಂ ಸದಸ್ಯರಾದ ಕೆ.ಪಿ.ಚಂದ್ರಕಲಾ ಅವರು ಕೊಡಗಿನ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿರುವುದಲ್ಲದೆ ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಮಹೇಶ್ ಜೈನಿ ಆರೋಪಿಸಿದ್ದಾರೆ.

ಜಿ.ಪಂ ಮಾಜಿ ಅಧ್ಯಕ್ಷರಾಗಿರುವ ಚಂದ್ರಕಲಾ ಅವರು ತಮ್ಮ ಜವಾಬ್ದಾರಿಯನ್ನು ಮರೆತು ಕೇವಲ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದು ವರ್ಗವನ್ನು ಮೆಚ್ಚಿಸುವುದಕ್ಕಾಗಿ ಬೇಜವಾಬ್ದಾರಿತನದ  ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಮ್ಮ ಹೇಳಿಕೆಯಲ್ಲಿ ಜಯಂತಿ ಆಚರಣೆಗೆ ಅರ್ಹರಾಗಿರುವ ಪ್ರತಿಯೊಬ್ಬರ ಜೀವನದಲ್ಲಿ ನ್ಯಾಯ, ಅನ್ಯಾಯಗಳೆರಡು ನಡೆದಿರುತ್ತದೆ ಎಂಬ ಮಾತುಗಳನಾಡಿದ್ದಾರೆ. ಆದರೆ ಟಿಪ್ಪು ಜಯಂತಿ ಹೊರತು ಪಡಿಸಿದಂತೆ ಬೇರೆ ಯಾರದ್ದೇ ಜಯಂತಿಗಳಿಗೆ ವಿರೋಧ ವ್ಯಕ್ತವಾದ ಉದಾಹರಣೆಗಳಿದ್ದರೆ ಸಾಬೀತು ಪಡಿಸಲಿ ಎಂದು ಮಹೇಶ್ ಜೈನಿ ಸವಾಲೆಸೆದಿದ್ದಾರೆ.

ಚಂದ್ರಾಕಲಾ ಅವರು ಕೋಮುಗಲಭೆಗೆ ಕುಮ್ಮಕ್ಕು ನೀಡುವ ಕೆಲಸವನ್ನು ಕೈ ಬಿಟ್ಟು ಈಗ ರಾಜ್ಯದಲ್ಲಿ ತಮ್ಮದೇ ಸರ್ಕಾರ ಇರುವುದರಿಂದ ಹದಗೆಟ್ಟ ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ಕಾಳಜಿ ವಹಿಸಲಿ. ಜನ ಸಾಮಾನ್ಯರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿ ಕೊಡಲಿ ಎಂದು ಅವರು ಒತ್ತಾಯಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಸುಮ್ಮನಿದ್ದ ಚಂದ್ರಕಲಾ ಅವರು ಇದೀಗ ಚುನಾವಣೆ ಸಮೀಸುತ್ತಿರುವುದರಿಂದ ಸಮಾಜದಲ್ಲಿ ಒಡಕು ಮೂಡಿಸುವ ಹೇಳಿಕೆಯನ್ನು ನೀಡುತ್ತಿದ್ದು, ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಮಹೇಶ್ ಜೈನಿ ಟೀಕಿಸಿದ್ದಾರೆ.

 ಅಭಿವೃದ್ಧಿ ಕೆಲಸವನ್ನೇ ಬಂಡವಾಳ ಮಾಡಿಕೊಂಡು ಕಳೆದ ಅನೇಕ ವರ್ಷಗಳಿಂದ ಚುನಾವಣೆಯನ್ನು ಎದುರಿಸುತ್ತಿರುವ ಜಿಲ್ಲೆಯ ಶಾಸಕರ ಕಾರ್ಯ ವೈಖರಿಯನ್ನು ಮೆಚ್ಚಿ ಕೊಡಗಿನ ಜನತೆ ಬಿ.ಜೆ.ಪಿ. ಯಿಂದ ಮಾತ್ರ ಅಭಿವೃದ್ಧಿ ಸಾಧ್ಯವೆಂದು ಒಬ್ಬ ಸಂಸದರನ್ನು ಹಾಗೂ ಮತ್ತೊಬ್ಬ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ. ಜಿಲ್ಲೆಯ ಜನರು ಯಾರ ಪರವಾಗಿದ್ದಾರೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಮಹೇಶ್ ಜೈನಿ, ಚಂದ್ರಕಲಾ ಅವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ತಮಗೆ ಜನರು ನೀಡಿರುವ ಜವಬ್ದಾರಿಯನ್ನು ಅಭಿವೃದ್ಧಿ ಪರ ಚಿಂತನೆಗಳ ಮೂಲಕ ನಿಭಾಯಿಸಲಿ ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News