ಮೋದಿ-ಶಾ ಆಟ ರಾಜ್ಯದಲ್ಲಿ ನಡೆಯಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-10-23 15:30 GMT

ಧಾರವಾಡ, ಅ.23: ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನ ಮೇಲೆ ಗೆಲುವು ಸಾಧಿಸುವ ಕನಸು ಕಾಣುತ್ತಿದ್ದಾರೆ. ಮೋದಿ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೂರು ಬಾರಿ ಕರ್ನಾಟಕಕ್ಕೆ ಬಂದರೂ ಅವರ ಮ್ಯಾಜಿಕ್ ಇಲ್ಲಿ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಭರವಸೆಗಳ ಸಾಕಾರದ ಸಂಭ್ರಮ, ಬೆಳಗಾವಿ ವಿಭಾಗದ ಸೌಲಭ್ಯಗಳ ವಿತರಣಾ ಸಮಾವೇಶ ಹಾಗೂ ಮಾಹಿತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರುನಾಡು ಎಂಬುದು ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ನಾಡು. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಇದು ಸರ್ವಜನಾಂಗದ ಶಾಂತಿಯ ತೋಟ. ದಾಸರು, ಸಂತರು ನೆಲೆಸಿದ ನಾಡಿನಲ್ಲಿ ಅವರ ತಂತ್ರಗಳು ಫಲಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಈಗ ಮಿಷನ್ 50: ಸುಳ್ಳು ಹೇಳಿ, ಜನರನ್ನು ದಾರಿ ತಪ್ಪಿಸಿ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಬಿಜೆಪಿಯವರು ಭಾವಿಸಿದ್ದಾರೆ. ಮಿಷನ್ 150 ನಮ್ಮ ಜೇಬಿನಲ್ಲಿದೆ ಎನ್ನುತ್ತಿದ್ದವರು ಈಗ ಮಿಷಷ್ 50ಗೆ ಬಂದು ನಿಂತಿದ್ದಾರೆ ಎಂದು ಮುಖ್ಯಮಂತ್ರಿ ವ್ಯಂಗ್ಯವಾಡಿದರು.

ಈ ಹಿಂದೆ ಯಡಿಯೂರಪ್ಪಟಿಪ್ಪುವೇಷ ಹಾಕಿಕೊಂಡು ಟಿಪ್ಪುವನ್ನು ಹಾಡಿ ಹೊಗಳಿದ್ದರು. ಈಗ ಟಿಪ್ಪುಕನ್ನಡ ವಿರೋಧಿ ಎನ್ನುತ್ತಿದ್ದಾರೆ. ಯಡಿಯೂರಪ್ಪಅವರೇ ನಿಮಗಿರುವ ನಾಲಿಗೆ ಒಂದೋ ಎರಡೋ? ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.

ಟಿಪ್ಪುಮಹಾನ್ ದೇಶಪ್ರೇಮಿ. ಅಲ್ಲಾಹನ ಮೇಲಾಣೆ. ನಾನು ಮತ್ತೆಂದೂ ಬಿಜೆಪಿ ಸೇರುವುದಿಲ್ಲ ಎಂದು ಕೆಜೆಪಿಯಲ್ಲಿದ್ದಾಗ ಯಡಿಯೂರಪ್ಪ ಹೇಳಿರಲಿಲ್ಲವೇ? ಬಿಜೆಪಿಯವರಿಗೆ ಚರಿತ್ರೆ ತಿರುಚಿ ಗೊತ್ತೇ ಹೊರತು ಸತ್ಯ ಹೇಳುವುದು ತಿಳಿದಿಲ್ಲ ಎಂದು ಮುಖ್ಯಮಂತ್ರಿ ಕಿಡಿಗಾರಿದರು.

ಬಿಜೆಪಿಯವರು ಪರಿವರ್ತನಾ ರ್ಯಾಲಿ ಮಾಡುತ್ತಾರಂತೆ. ಅಧಿಕಾರದಲ್ಲಿ ಇದ್ದಾಗ ಏನೇನು ಪರಿವರ್ತನೆ ಮಾಡಿದ್ದೇವೆ ಎಂಬುದನ್ನು ಜನತೆಯ ಮುಂದೆ ಹೇಳಲಿ ಎಂದು ಮುಖ್ಯಮಂತ್ರಿ ಸವಾಲು ಹಾಕಿದರು.

ಅಚ್ಛೇ ದಿನ್ ಬಂತಾ?: ಅಚ್ಛೇ ದಿನ್ ಆಯೇಂಗೆ ಎಂದು ನರೇಂದ್ರ ಮೋದಿ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದೇ ಹೇಳಿದ್ದು. ಯಾರಿಗೆ ಬಂತು ಅಚ್ಛೇ ದಿನ್. ರೈತರಿಗೆ, ಬಡವರಿಗೆ, ಮಹಿಳೆಯರಿಗೆ, ನಿರುದ್ಯೋಗಿ ಯುವಕ, ಯುವತಿಯರಿಗೆ ಬರಲಿಲ್ಲ. ಅಂಬಾನಿ, ಅದಾನಿ ಮತ್ತು ಅಮಿತ್ ಶಾ ಪುತ್ರ ಜಯ್‌ಶಾನಿಗೆ ಬಂತು ಅಚ್ಛೇ ದಿನ್ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬಹುಮುಖ ಬೆಲೆಯ ನೋಟುಗಳ ಅಮಾನ್ಯದಿಂದ ನಿದ್ದೆಗೆಟ್ಟವರು ಜನ ಸಾಮಾನ್ಯರೆ ಹೊರತು ಕಾಳ ಧನಿಕರಲ್ಲ. ನೋಟು ಅಮಾನ್ಯದಿಂದ ದೇಶದ ಜಿಡಿಪಿ ಬೆಳವಣಿಗೆ ಕುಸಿಯುತ್ತದೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೇಳಿದ್ದರು. ಈಗ ಅದೇ ರೀತಿ ಆಗಿದೆ. ದೇಶದ ಅರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಸ್ಪೀಕರ್ ಕೆ.ಬಿ.ಕೋಳಿವಾಡ, ಸಚಿವರಾದ ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ, ವಿನಯಕುಲಕರ್ಣಿ, ಎಂ.ಬಿ.ಪಾಟೀಲ್, ರಮೇಶ್ ಜಾರಕಿಹೊಳಿ, ರುದ್ರಪ್ಪ ಲಮಾಣಿ, ಶಾಸಕರಾದ ಅಶೋಕ್ ಪಟ್ಟಣ್, ಬಿ.ಆರ್.ಯಾವಗಲ್, ಫಿರೋಝ್ ಸೇಠ್, ಗಣೇಶ್ ಹುಕ್ಕೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ಹೇಳಿಕೆ ಬಾಲಿಶ

ಕೇಂದ್ರ ಸರಕಾರವನ್ನು ವಿರೋಧಿಸುವ ರಾಜ್ಯಗಳಿಗೆ ಬಿಡಿಗಾಸು ಕೊಡುವುದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬಾಲಿಶ. ಸಂವಿಧಾನ, ಒಕ್ಕೂಟ ವ್ಯವಸ್ಥೆ ಏನು ಎಂಬುದು ಪ್ರಧಾನಿಯವರಿಗೆ ಗೊತ್ತಿದೆ ಎಂದು ನಾನು ಭಾವಿಸಿದ್ದೇನೆ. ಕೇಂದ್ರ ಸರಕಾರಕ್ಕೆ ಬರುವ ಹಣ ರಾಜ್ಯಗಳ ತೆರಿಗೆ ಹಣ ಅಲ್ಲವೇ? ಸೇವಾ ತೆರಿಗೆ, ಅಬಕಾರಿ ತೆರಿಗೆ, ಐಟಿ-ಬಿಟಿ ರಫ್ತು ಮೂಲಕ ಕೇಂದ್ರಕ್ಕೆ ಹೋಗುವ ಹಣ ನಮ್ಮದಲ್ಲವೇ? ಇಷ್ಟಕ್ಕೂ ಕೇಂದ್ರದಿಂದ ಬರುವ ಅನುದಾನ ದಾನ, ಧರ್ಮವಲ್ಲ. ಅದು ನಮ್ಮ ಹಕ್ಕು. ಮೋದಿಯವರೇ, ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಸಂವಿಧಾನ ಬದ್ಧವಾಗಿ ಸರಕಾರ ನಡೆಸುತ್ತಿದ್ದೇವೆ.

-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News