ಸರಕಾರದ ಸಾಧನೆಗಳ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧ

Update: 2017-10-23 15:19 GMT

ಧಾರವಾಡ, ಅ.23: ನಮ್ಮ ಸರಕಾರ ಏನೂ ಮಾಡಿಲ್ಲ ಎಂದು ಸುಳ್ಳು ಆಪಾದನೆಗಳನ್ನು ಮಾಡುತ್ತಿರುವ ಬಿಜೆಪಿ ಮುಖಂಡರಿಗೆ ಧೈರ್ಯ ಇದ್ದರೆ ಸಾಧನೆಗಳ ಚರ್ಚೆಗೆ ಒಂದೇ ವೇದಿಕೆಗೆ ಬರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಥಾಹ್ವಾನ ನೀಡಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಭರವಸೆಗಳ ಸಾಕಾರದ ಸಂಭ್ರಮ, ಬೆಳಗಾವಿ ವಿಭಾಗದ ಸೌಲಭ್ಯಗಳ ವಿತರಣಾ ಸಮಾವೇಶ ಹಾಗೂ ಮಾಹಿತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸುಳ್ಳು ಆಪಾದನೆಗಳನ್ನು ಮಾಡುವುದಲ್ಲ. ಅವರಿಗೆ ಧೈರ್ಯ ಇದ್ದರೆ ಸಾಧನೆಗಳ ಚರ್ಚೆಗೆ ಒಂದೇ ವೇದಿಕೆಗೆ ಬರಲಿ. ಅಧಿಕಾರದಲ್ಲಿದ್ದಾಗ ಅವರು ಏನೂ ಮಾಡಿಲ್ಲ. ನಮ್ಮ ಹಾಗೂ ಬಿಜೆಪಿ ಸರಕಾರದ ಸಾಧನೆಗಳ ಚರ್ಚೆಗೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ ಇಲ್ಲಿಗೆ ಬರಬಹುದಿತ್ತು. ಆದರೆ ಅವರಿಗೆ ಧೈರ್ಯ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಜನತೆ ಅನೇಕ ನಿರೀಕ್ಷೆ ಇಟ್ಟುಕೊಂಡು ನಮಗೆ 2013ರ ವಿಧಾನಸಭಾ ಚುನಾವಣೆಯಲ್ಲಿ ಆಶೀರ್ವಾದ ಮಾಡಿದರು. ಅವರಿಗೆ ಉತ್ತರದಾಯಿತ್ವ ಆಗಿರುವುದು ನಮ್ಮ ಜವಾಬ್ದಾರಿ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡದೆ ಇದ್ದ ಕಾರ್ಯಕ್ರಮಗಳನ್ನೂ ಜಾರಿಗೆ ತಂದಿದ್ದೇವೆ. ರೈತರ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್, ಮಾತೃಪೂರ್ಣ ಯೋಜನೆ ಇದರಲ್ಲಿ ಪ್ರಮುಖವಾದದ್ದು. ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 156 ಆಶ್ವಾಸನೆಗಳನ್ನು ಈಡೇರಿಸಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಅನ್ನಭಾಗ್ಯ, ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಭ್ಯ, ಶಾಲಾ ಮಕ್ಕಳಿಗೆ ಹಾಲು, ಕೃಷಿ ಭಾಗ್ಯ ಯೋಜನೆಯಲ್ಲಿ 1.70 ಲಕ್ಷ ಹೊಂಡಗಳ ನಿರ್ಮಾಣ, ಇದು ಸುಳ್ಳೇ? ವಿದ್ಯಾಸಿರಿ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯಧನ, ಮೈತ್ರಿ, ಮನಸ್ವಿನಿ, ಅರೋಗ್ಯ ಭಾಗ್ಯ, ಅನಿಲ ಭಾಗ್ಯ, ಆರೋಗ್ಯ ಭಾಗ್ಯ ಯೋಜನೆ ನಿಮ್ಮ ಕಾಲದಲ್ಲಿ ಆಗಿತ್ತೆ ಶೆಟ್ಟರ್ ಅವರೇ? ನೀವು ಮುಖ್ಯಮಂತ್ರಿ ಆಗಿದ್ದಾಗ ಸಾಲ ಮನ್ನಾ ಘೋಷಣೆ ಮಾಡಿ ಹೋಗಿಬಿಟ್ಟಿರಿ. ಅದನ್ನು ಜಾರಿಗೆ ತಂದವರು ನಾವಲ್ಲವೇ? ಎಂದು ಸಿದ್ದರಾಮಯ್ಯ ಹೇಳಿದರು.

ಸಂಸತ್ತಿಗೆ ಮುತ್ತಿಗೆ ಹಾಕಿ: ರೈತರ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಆಗಿದ್ದಾಗ ಹೇಳಿದ್ದ ಯಡಿಯೂರಪ್ಪ,ಈಗ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೇಳುತ್ತಾರೆ. ‘ಉತ್ತರ ಕುಮಾರನ ಪೌರುಷ ಒಲೆಯ ಮುಂದೆ’ ಎಂಬಂತೆ ಆಗಿದೆ ನಿಮ್ಮ ವರ್ತನೆ ಎಂದು ವ್ಯಂಗ್ಯವಾಡಿದ ಮುಖ್ಯಮಂತ್ರಿ, ರೈತರ ಬಗ್ಗೆ ಕಳಕಳಿ ಇದ್ದರೆ ಸಂಸತ್ತಿಗೆ ಮುತ್ತಿಗೆ ಹಾಕಿ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡುವಂತೆ ಪ್ರಧಾನಿ ಮೇಲೆ ಒತ್ತಡ ಹೇರಿ. ಇಲ್ಲದಿದ್ದರೆ ರೈತರ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ ಎಂದರು.

ಪ್ರಧಾನಿ ಬಳಿಗೆ ನಿಯೋಗ ಹೋದಾಗ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡಿ ಎಂದು ಮನವಿ ಮಾಡಿದೆ. ನಿಯೋಗದಲ್ಲಿ ಬಂದಿದ್ದ ರಾಜ್ಯ ಬಿಜೆಪಿ ನಾಯಕರು ಆಗ ತುಟಿ ಬಿಚ್ಚಲಿಲ್ಲ. ರೈತರ ಬಗ್ಗೆ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡದ ಯಡಿಯೂರಪ್ಪ, ಮಣ್ಣಿನ ಮಗ ಅಂತೆ. ಹಾಗಾದರೆ ನಾನು ಯಾರ ಮಗ. ನಾನೂ ಮಣ್ಣಿನ ಮಗನೇ. ರೈತರ ಕಷ್ಟ ಏನು ಎಂಬುದು ನನಗೂ ಗೊತ್ತಿದೆ. ಹೀಗಾಗಿಯೆ ಅವರ ಸಾಲ ಮನ್ನಾ ಮಾಡಿದ್ದು ಎಂದು ಮುಖ್ಯಮಂತ್ರಿ ಹೇಳಿದರು.

 ಮಹಾದಾಯಿ ನದಿ ನೀರಿನ ವಿವಾದ ಮಾತುಕತೆ ಮೂಲಕ ಇತ್ಯರ್ಥ ಮಾಡಲು ಪ್ರಧಾನಿಯವರೆ ನಿಮಗೆ ಶಕ್ತಿ, ಅಧಿಕಾರ ಇದೆ. ಮೂರೂ ರಾಜ್ಯಗಳ ಮುಖ್ಯಮಂತ್ರಿ ಯವರನ್ನು ಕರೆದು ಸಭೆ ಮಾಡಿ. ಕೇಂದ್ರದಲ್ಲಿ ಸಚಿವರಾಗಿರುವ ಅನಂತಕುಮಾರ್ ಈ ಭಾಗದವರು. ಅವರಾದರೂ ಈ ಬಗ್ಗೆ ಪ್ರಯತ್ನ ಮಾಡಲಿ ಎಂದು ಅವರು ತಿಳಿಸಿದರು.

ಗೋವಾ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇವೆ. ಗೋವಾಗೆ ಹೋಗುತ್ತೇವೆ ಎಂದು ಹೇಳಿದ ಬಿಜೆಪಿ ನಾಯಕರು ಇನ್ನೂ ಹೋಗಿಲ್ಲ. ಆ ಬಗ್ಗೆ ಸುದ್ದಿಯೆ ಇಲ್ಲ. ಇದು ಢೋಂಗಿತನ ಅಲ್ಲವೆ ಎಂದು ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ರೈತರ ಅನುಕೂಲಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದಿದ್ದು ನಮ್ಮ ಸರಕಾರ, ಅದನ್ನು ಕೇಂದ್ರ ಸರಕಾರ ದೇಶವ್ಯಾಪಿ ಕಾಪಿ ಮಾಡಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ನೀರಾವರಿಗಾಗಿ ಖರ್ಚು ಮಾಡಿದ್ದು ಕೇವಲ 18 ಸಾವಿರ ಕೋಟಿ ರೂ.ಗಳು. ಐದು ವರ್ಷಗಳಲ್ಲಿ ನಾವು ವೆಚ್ಚ ಮಾಡುತ್ತಿರುವುದು 60 ಸಾವಿರ ಕೋಟಿಗೂ ಹೆಚ್ಚು. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಕಾಮಗಾರಿಗಳಿಗೆ 17 ಸಾವಿರ ಕೋಟಿ ಕೊಟ್ಟವರು ನಾವಲ್ಲವೇ? ಎಂದು ಅವರು ಸಭಿಕರನ್ನು ಪ್ರಶ್ನಿಸಿದರು.

ಇಂದಿನ ಸಮಾವೇಶದಲ್ಲಿ 40 ಸಾವಿರ ಫಲಾನುಭವಿಗಳಿಗೆ ಸವಲತ್ತು ವಿತರಣೆ ಆಗುತ್ತಿದೆ. ಕಳೆದ 5 ವರ್ಷದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ನವ ಕರ್ನಾಟಕ ನಿರ್ಮಾಣಕ್ಕೆ ಮತ್ತೆ ಜನರ ಆಶೀರ್ವಾದ ಬಯಸುತ್ತಿದ್ದೇವೆ. ರಾಜ್ಯದ ಜನತೆ ನಮ್ಮಲ್ಲಿ ನಂಬಿಕೆ ಮತ್ತು ವಿಶ್ವಾಸ ಇಟ್ಟಿದ್ದಾರೆ. ಅದಕ್ಕೆ ನಾವು ಎಂದೂ ದ್ರೋಹ ಬಗೆಯುವುದಿಲ್ಲ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಇದೊಂದು ಅವಿಸ್ಮರಣೀಯ ಕಾರ್ಯಕ್ರಮ ಧಾರವಾಡದ ಇತಿಹಾಸದಲ್ಲಿ ಇಂತಹ ಕಾರ್ಯಕ್ರಮ ನಡೆದಿರಲಿಲ್ಲ. ಜನರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಮೂರು ಕಂದಾಯ ವಿಭಾಗದಲ್ಲಿ ಸಾಧನಾ ಸಮಾವೇಶ ನಡೆದಿದೆ. ಇದು ನಾಲ್ಕನೆ ಸಮಾವೇಶ. ಸರಕಾರದ ಕಾರ್ಯಕ್ರಮಗಳನ್ನು ರಾಜ್ಯದ ಜನತೆಗೆ ಪರಿಚಯಿಸುವುದು ಇದರ ಉದ್ದೇಶ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News