ವಿಧಾನಸೌಧ ವಜ್ರ ಮಹೋತ್ಸವ:ಝಗಮಗಿಸುತ್ತಿರುವ ರಾಜ್ಯದ ಶಕ್ತಿ ಕೇಂದ್ರ

Update: 2017-10-23 15:22 GMT

ಬೆಂಗಳೂರು, ಅ. 23: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಅರವತ್ತು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಅ.25ರಂದು ವಜ್ರ ಮಹೋತ್ಸವ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಸ್ವಾಗತಕ್ಕೆ ಭರದ ಸಿದ್ಧತೆ ನಡೆಸಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿಧಾನಸೌಧದಲ್ಲಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಅವರಿಗೆ ಕೆಂಪುಹಾಸಿನ ಸ್ವಾಗತ ಕೋರಲು ಸಿದ್ಧತೆ ನಡೆದಿದ್ದು, ಅ.25ರ ಬೆಳಗ್ಗೆ 11ಕ್ಕೆ ಸರಿಯಾಗಿ ರಾಮನಾಥ್ ಕೋವಿಂದ್ ಅವರನ್ನು ರಾಜಭವನದಿಂದ ವಿಧಾನಸೌಧದ ವರೆಗೆ ವಿಶೇಷ ಮೆರವಣಿಗೆಯಲ್ಲಿ ಬರಲಿದ್ದಾರೆ.

ಅಶ್ವಾರೂಢ ಪಡೆ ವಿಶೇಷವಾಗಿ ರಾಜಭವನದಿಂದ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ವರೆಗೆ ಕರೆ ತರಲಿದೆ. ರಾಜಭವನದಿಂದ ವಿಧಾನಸೌಧದ ವರೆಗಿನ ಮಾರ್ಗದಲ್ಲಿ ನಳನಳಿಸುವ ವಿವಿಧ ಜಾತಿಯ ಹೂವುಗಳಿಂದ ಅಲಂಕರಿಸಲಾಗುತ್ತಿದೆ.

ಕೆಂಗಲ್ ಹನುಮಂತಯ್ಯ ಪ್ರತಿಮೆಯಿಂದ ವಿಧಾನಸಭೆ ಸ್ಪೀಕರ್ ಆಸನದ ವರೆಗೆ ರಾಷ್ಟ್ರಪತಿಗಳೊಂದಿಗೆ ಸ್ಪೀಕರ್ ಕೆ.ಬಿ.ಕೋಳಿವಾಡ, ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಹಿರಿಯ ಅಧಿಕಾರಿಗಳು ಹೆಜ್ಜೆ ಹಾಕಲಿದ್ದಾರೆ. ಅನಂತರ ವಿಧಾನಸಭೆಯಲ್ಲಿ ರಾಷ್ಟ್ರಪತಿಗಳು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಮೂಲಕ ಐತಿಹಾಸಿಕ ಕ್ಷಣಗಳಿಗೆ ಎಲ್ಲರೂ ಸಾಕ್ಷಿಯಾಗಲಿದ್ದಾರೆ.

ವಿಧಾನಸಭೆಯನ್ನು ವಿಶೇಷವಾಗಿ ಹೂವುಗಳಿಂದ ಅಲಂಕಾರ ಮಾಡಲಿದ್ದು, ಇದೇ ಮೊದಲ ಬಾರಿಗೆ ಇಡೀ ವಿಧಾನಸಭೆಗೆ ಹೊಸ ಕಳೆ ಬರಲಿದೆ. ಅದೇರೀತಿ, ಭಾಷಣ ಮುಗಿದ ನಂತರ ಕೋವಿಂದ್ ಅವರು ವಿಧಾನ ಪರಿಷತ್ತಿನ ಸಭಾಂಗಣಕ್ಕೂ ಭೇಟಿ ನೀಡಲಿದ್ದಾರೆ.

ಝಗಮಗಿಸುವ ಶಕ್ತಿ ಕೇಂದ್ರ: ವಜ್ರ ಮಹೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಇದೇ ವೇಳೆ, ಐತಿಹಾಸಿಕ ಕಟ್ಟಡ ವಿಧಾನಸೌಧಕ್ಕೆ ವಿಶೇಷವಾದ ವಿದ್ಯುದ್ದೀಪಾಲಂಕಾರ ಮಾಡಲಾಗಿದ್ದು, ರಾತ್ರಿ ವೇಳೆಯಲ್ಲಿ ವಿಧಾನಸೌಧ ಅಕ್ಷರಶಃ ಝಗಮಗಿಸುತ್ತಿದೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಅನ್ನು ಒಂದು ರೀತಿಯಲ್ಲಿ ಚಿತ್ರಮಂದಿರದ ರೀತಿಯಲ್ಲಿ ಮಾರ್ಪಾಟು ಮಾಡಿದ್ದು, ವಿಧಾನಸೌಧ ನಡೆದು ಬಂದ ಹಾದಿಯ ಬಗ್ಗೆ ಪ್ರಮುಖವಾಗಿ ಮೂರು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಅನಂತರ ಸಂಜೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖಾ ಅವರ ತಂಡದಿಂದದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News