ಬಸ್ ನಿಲ್ದಾಣಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಕೆಎಸ್ಸಾರ್ಟಿಸಿ ಒಪ್ಪಿಗೆ

Update: 2017-10-23 15:36 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.23 ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್‌ಗಳನ್ನು ಬೇಡಿಕೆಯ ಅನುಗುಣವಾಗಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿ ಆರಂಭಿಸಲು ಸ್ಥಳಾವಕಾಶ ನೀಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದ್ದಾರೆ.

ಸೋಮವಾರ ನಗರದಲ್ಲಿರುವ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಹಮ್ಮಿಕೊಂಡಿದ್ದ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಪಟ್ಟಣ, ನಗರ, ತಾಲ್ಲೂಕು ಕೇಂದ್ರದಲ್ಲಿ ಬಸ್ ನಿಲ್ದಾಣ ಅಥವಾ ಆಸ್ಪತ್ರೆಗಳ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ಕೆಎಸ್ಸಾರ್ಟಿಸಿ ಕ್ಯಾಂಟೀನ್‌ಗಳಿಗೆ ತೊಂದರೆಯಾಗದಂತೆ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಅವಕಾಶ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ಅವತಾರ್ ಮೊಬೈಲ್ ಬುಕ್ಕಿಂಗ್:ಪ್ರಯಾಣಿಕರಿಗೆ ಅನುಕೂಲವಾಗಲು ಮತ್ತು ಕಾಗದ ರಹಿತ ಟಿಕೆಟ್ ವ್ಯವಸ್ಥೆ ಮಾಡಲು ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಲು ಹೊಸದಾಗಿ ಅವತಾರ್ ಮೊಬೈಲ್ ಬುಕ್ಕಿಂಗ್ ಆ್ಯಪ್ ಅನ್ನು ಪರಿಚಯಿಸಲಾಗುವುದು. ಇದಕ್ಕಾಗಿ ಹೀಗಾಗಲೆ ಟೆಂಡರ್ ಕರೆಯಲಾಗಿದೆ. ಆದಷ್ಟೂ ಶೀಘ್ರದಲ್ಲೇ ಈ ಸೇವೆಯ ಲಾಭವನ್ನು ಪ್ರಯಾಣಿಕರು ಪಡೆಯಬಹುದು ಎಂದರು.

ಪ್ರಯಾಣಿಕರ ಮಾಹಿತಿಗಾಗಿ ಬಸ್ ನಿಲ್ದಾಣಗಳಲ್ಲಿ ಡಿಜಿಟಲ್ ಮಾಹಿತಿ ಫಲಕ ಅಳವಡಿಸುತ್ತೇವೆ. ಬಸ್ ವೇಳಾಪಟ್ಟಿ ಆಗಮನ, ನಿರ್ಗಮನದ ಮಾಹಿತಿಯನ್ನು ಪ್ರಕಟಿಸಲು ನಿರ್ಧಾರಿಸಿದ್ದು ಅದನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಆರು ಹೊಸ ಬಸ್ ನಿಲ್ದಾಣಗಳು:ಸುಮಾರು 53 ಕೋಟಿ ವೆಚ್ಚದಲ್ಲಿ ರಾಜ್ಯದ ವಿವಿಧಡೆ ಆರು ಹೊಸ ಬಸ ನಿಲ್ದಾಣ ನಿರ್ಮಾಣ ಮಾಡಲಾಗುವುದು. ಹರಿಹರ, ಕೋಲಾರ, ದೊಡ್ಡಬಳ್ಳಾಪುರ ಸೇರಿ 21 ಬಸ್ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಮಂಗಳೂರಿನಲ್ಲಿ ಟ್ರಾನ್ಸ್‌ಪೋರ್ಟ್ ಹಬ್ ಮಾಡಲು ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.

ಬಸ್ ನಿಲ್ದಾಣಗಳ ಶೌಚಾಲಯಗಳಲ್ಲಿನ ಅಸಮರ್ಪಕ ನಿರ್ವಹಣೆ ಹಾಗು ಹಣ ಪಡೆಯುತ್ತಾರೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಶೌಚಾಲಯಗಳನ್ನು ಸುಲಭ್ ಇಂಟರ್ ನ್ಯಾಷನಲ್ ಸಂಸ್ಥೆಗೆ ನಿರ್ವಹಣೆ ಮಾಡಲು ನೀಡಲು ನಿರ್ಧಾರಕ್ಕೆ ಬರಲಾಗಿದೆ. ಬೆಂಗಳೂರು ಕೇಂದ್ರ ವಿಭಾಗ, ರಾಮನಗರ ಹಾಗು ಮಂಡ್ಯ ಜಿಲ್ಲೆಗಳ ಬಸ್ ನಿಲ್ದಾಣಗಳನ್ನು ಸುಲಭ್ ಶೌಚಾಲಯಕ್ಕೆ ವಹಿಸಲಿದ್ದು ನಂತರ ಹಂತ ಹಂತವಾಗಿ ರಾಜ್ಯದ ಎಲ್ಲಾ 151 ಬಸ್ ನಿಲ್ದಾಣಗಳ ಶೌಚಾಲಯ ನಿರ್ವಹಣೆಯನ್ನು ಸುಲಭ್ ಶೌಚಾಲಯಕ್ಕೆ ವಹಿಸಲಾಗುತ್ತದೆ ಎಂದರು.

100 ಸಿಸಿ ಒಳಗಿನ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರನಿಗೆ ಅವಕಾಶವಿಲ್ಲ ಎಂದು ಕೋರ್ಟ್ ಆದೇಶ ನೀಡಿದೆ. ಹಾಗಾಗಿ ನಾವು ಅದನ್ನು ಜಾರಿಗೆ ತರಲಾಗುತ್ತಿದೆ. ಇದರಲ್ಲಿ ನಮ್ಮದು ಯಾವದೇ ರೀತಿ ಹಸ್ತಕ್ಷೇಪ ಇಲ್ಲ.

-ಎಚ್.ಎಂ.ರೇವಣ್ಣ ,ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News