10 ಕೋಟಿ ಮಂಜೂರು ಮಾಡಿರುವ ಕ್ರಮ ಆಕ್ಷೇಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ
ಬೆಂಗಳೂರು, ಅ.23: ವಿಧಾನಸೌಧ ವಜ್ರ ಮಹೋತ್ಸವ ಆಚರಣೆಗೆ ರಾಜ್ಯ ಸರಕಾರ 10 ಕೋಟಿ ರೂ. ಖರ್ಚು ಮಾಡುತ್ತಿರುವ ವಿಚಾರ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.
ವಿಧಾನ ಸೌಧ ವಜ್ರ ಮಹೋತ್ಸವ ಆಚರಣೆಗೆ 10 ಕೋಟಿ ರೂ. ಮಂಜೂರು ಮಾಡಿರುವ ರಾಜ್ಯ ಸರಕಾರದ ಕ್ರಮ ಆಕ್ಷೇಪಿಸಿ ಬೆಂಗಳೂರಿನ ವಕೀಲ ಎಸ್.ಎನ್.ಅರವಿಂದ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ, ವಜ್ರ ಮಹೋತ್ಸವ ಆಚರಣೆಗಾಗಿ ಹಣ ಖರ್ಚು ಮಾಡದಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರು ಮತ್ತು ಆಡಳಿತ ವಿಭಾಗದ ಕಾರ್ಯದರ್ಶಿಯನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿ ಶೀಘ್ರ ವಿಚಾರಣೆಗೆ ಬರುವ ಸಾಧ್ಯತೆಯಿದೆ.
2017ರ ಅ.25ರಂದು ವಿಧಾನಸೌಧ ವಜ್ರ ಮಹೋತ್ಸವ ಆಚರಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಅದಕ್ಕಾಗಿ 10 ಕೋಟಿ ರೂ. ವ್ಯಯಿಸಲು ಉದ್ದೇಶಿಸಿದೆ. ಆದರೆ, ರಾಜ್ಯ ಸರಕಾರವು ವಜ್ರ ಮಹೋತ್ಸವಕ್ಕೆ 10 ಕೋಟಿ ರೂ. ಖರ್ಚು ಮಾಡುವುದು ಸರಿಯಲ್ಲ. ಸರಕಾರವು ಜನರ ಮೇಲೆ ತೆರಿಗೆ ವಿಧಿಸಿ ಹಣ ಸಂಗ್ರಹಿಸಿರುತ್ತದೆ. ಆ ಹಣವನ್ನು ಜನರ ಕಲ್ಯಾಣ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ವ್ಯಯಿಸಬೇಕು. ಹೀಗಾಗಿ, ಜನರ ತೆರಿಗೆ ಹಣವನ್ನು ವಜ್ರ ಮಹೋತ್ಸವ ಆಚರಣೆಯಂತಹ ಅನುತ್ಪಾದಕ ಕಾರ್ಯಗಳಿಗೆ ಖರ್ಚು ಮಾಡುವುದು ನ್ಯಾಯಸಮ್ಮವಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಹಾಗೆಯೇ, ಅ.25ರಂದು ನಡೆಯಲಿರುವ ವಿಧಾನಸೌಧ ವಜ್ರ ಮಹೋತ್ಸವ ಆಚರಣೆಗೆ ಹಣ ವ್ಯಯಿಸದಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.