ಶಿವಾನಂದ ಜಾಮ್‍ದಾರ್ ಹೇಳಿಕೆ ಸಮಾಜ ಒಡೆಯು ಉದ್ದೇಶವಾಗಿದೆ: ಮಾಜಿ ವಿಧಾನ ಪರಿಷತ್ ಸದಸ್ಯ ತೋಟದಾರ್ಯ
ಮೈಸೂರು,ಅ.23: ಲಿಂಗಾಯಿತರು ಹಿಂದುಗಳಲ್ಲ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಾನಂದ ಜಾಮ್ ದಾರ್ ಅವರು ನೀಡಿರುವ ಹೇಳಿಕೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಖಂಡಿಸಿದ್ದಾರೆ.
ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಜಾವರ ಶ್ರೀಗಳ ಬಗ್ಗೆ ಅಸಂಬದ್ಧ ಮಾತನಾಡಿರುವ ಅವರು, ಲಿಂಗಾಯಿತರು ಹಿಂದೂಗಳೇ ಅಲ್ಲ, ಹಾಗಾಗಿ ಹಿಂದೂ ಸಮಾಜವನ್ನು ಲಿಂಗಾಯಿತರು ಬಿಟ್ಟು ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎನ್ನುವ ಹೇಳಿಕೆ ಸಮಾಜವನ್ನು ಒಡೆಯುವ ಉದ್ದೇಶವಾಗಿದೆ ಎಂದು ದೂರಿದರು.
ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ದೇಶದ ಕೈಸ್ತರು, ಮುಸ್ಲಿಂಬಾಂದವರನ್ನ ಹೊರತುಪಡಿಸಿ ವೀರಶೈವ, ಲಿಂಗಾಯಿತ, ಜೈನ, ಸಿಕ್ಕರು, ಬೌದ್ಧರು ಸೇರಿದಂತೆ ಇತ್ಯಾದಿ ಎಲ್ಲಾ ಧರ್ಮಗಳು ಹಿಂದೂಗಳೇ ಅವರಿಗೆ ಪ್ರತ್ಯೇಕ ಧರ್ಮವಿಲ್ಲ, ಇದನ್ನು ಇತಿಹಾಸ, ಸರ್ಕಾರ ನಡಾವಳಿ, ನ್ಯಾಯಾಲಯದ ತೀರ್ಪುಗಳು, ಕಾನೂನುಗಳು ಆಧಾರವಾಗಿವೆ ಎಂದು ತಿಳಿಸಿದರು.
ಡಾ.ಶಿವಾನಂದ ಜಾಮ್ ದಾರ್ ಅವರು ಲಿಂಗಾಯಿತರು ಹಿಂದೂಗಳಲ್ಲ ಎಂದು ಹೇಳಲು ಅವರೇನು ಇಡೀ ಲಿಂಗಾಯಿತ ಸಮುದಾಯದ ಪ್ರತಿನಿಧಿಯೇ?. ಲಿಂಗಾಯಿತರಿಗೆ ಹಿಂದೂ ಕಾನೂನು ಹೊರತಾಗಿ ಮತ್ತೇನಾದರೂ ವೈಯಕ್ತಿಕ ಕಾನೂನು ಇದೇಯೇ ಎಂದು ಪ್ರಶ್ನಿಸಿದರು.
ಸರ್ಕಾರದಲ್ಲಿ ಉನ್ನತಾಧಿಕಾರಿಯಾಗಿದ್ದು ಸೇವೆ ಸಲ್ಲಿಸಿರುವ ಇವರು ಸಮಾಜವನ್ನು ದಾರಿ ತಪ್ಪಿಸುವುದು ಎಷ್ಟು ಸರಿ, ಇನ್ನೂ ಮೇಲಾದರೂ ಈ ರೀತಿ ಸಂವೇಧನಾಶೀಲ ಸಂಗತಿಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡದಂತೆ ಆಗ್ರಹಿಸಿದರು.
ಕರ್ನಾಟಕ ಮಾಧ್ಯಮಿಕ ಶಿಕ್ಷಣ ಸಂಘದ ನಂದೀಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.