ಪಠ್ಯ ಪುಸ್ತಕಗಳಲ್ಲಿ ವೀರ ನಾರಿಯರ ಮಾಹಿತಿ ಮರೆಯಾಗುತ್ತಿರುವುದು ವಿಷಾದನೀಯ: ಮಂಜುಳ ಮಾನಸ

Update: 2017-10-23 16:26 GMT

ಮೈಸೂರು,ಅ.23: ಪಠ್ಯ ಪುಸ್ತಕಗಳಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ವೀರಮರಣವನ್ನಪ್ಪಿದ ವೀರ ನಾರಿಯರ ಮಾಹಿತಿ ಪಾಠ ಪ್ರವಚನಗಳು ಮಾಯಾಗುತ್ತಿರುವುದು ವಿಷಾದನೀಯ ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ ಹೇಳಿದರು.

ನಗರದ ಕಲಾಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ  ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ  ಭಾಷಣಕಾರರಾಗಿ ಅವರು ಮಾತನಾಡಿದರು.

ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದವರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸಹ ಒಬ್ಬರಾಗಿದ್ದರು ಹೈದರಾಲಿ ಟಿಪ್ಪು ಸುಲ್ತಾನ್, ಮಹಾತ್ಮ ಗಾಂಧಿ, ನೆಹರು, ಪಟೇಲ್, ಭಗತ್ ಸಿಂಗ್, ಬೆಳವಡಿ ಮಲ್ಲಮ್ಮ, ಜಾನ್ಸಿ ರಾಣಿ ಲಕ್ಷ್ಮಿಬಾಯಿ ಇವರುಗಳಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಕಿತ್ತೂರು ರಾಣಿ ಚೆನ್ನಮ್ಮ ಸಹ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ್ದರು. ಅವರು ಬ್ರಿಟೀಷರ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಒಂದು ವರ್ಷದ ಎಳೇ ಮಗುವನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡು ಹೋರಾಟ ನಡೆಸಿದ್ದನ್ನು ನೋಡಿದರೆ ಅವರ ದೇಶಭಕ್ತಿ ಎಷ್ಟರ ಮಟ್ಟಿನದ್ದಾಗಿತ್ತು ಎಂಬುದು ವ್ಯಕ್ತವಾಗುತ್ತದೆ ಎಂದರು. 

ಕಿತ್ತೂರು ರಾಣಿ ಚೆನ್ನಮ್ಮರ ಬಗ್ಗೆ ಹಿಂದೆ ಪಠ್ಯ ಪುಸ್ತಕಗಳಲ್ಲಿ ಪಾಠ ಪ್ರವಚನಗಳು ಮುದ್ರಿತಗೊಳ್ಳುತ್ತಿದ್ದವು. ಆದರೇ ದಿನ ಕಳೆದಂತೆ ಇವುಗಳು ಪಠ್ಯ ಪುಸ್ತಕಗಳಿಂದ ಕಣ್ಮರೆಯಾಗುತ್ತಿರುವುದು ಇಂದಿನ ಯುವ ಪೀಳಿಗೆಗೆ ಇಂತಹ ವೀರ ನಾರಿಯರ ಬಗ್ಗೆ ಮಾಹಿತಿಯೇ ಇಲ್ಲದಂತಾಗುತ್ತದೆ. ಪಠ್ಯ ಪುಸ್ತಕಗಳಿಂದ ವೀರ ನಾರಿಯರ ಮಾಹಿತಿ ಮರೆಯಾಗುತ್ತಿರುವುದು ವಿಷಾದನೀಯ, ಆದ ಕಾರಣ ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸುವುದು ಸೂಕ್ತ ಎಂದರು.

ಇದಕ್ಕೂ ಮೊದಲು ಕಿತ್ತೂರು ರಾಣಿ ಚೆನ್ನಮ್ಮನವರ  ಭಾವಚಿತ್ರಕ್ಕೆ ಪುಷ್ಪಾರ್ಣೆಗೈದು, ದೀಪಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ವಿವಿಧ ಶಾಲೆಗಳ ಪುಟಾಣಿಗಳು ಕಿತ್ತೂರು ರಾಣಿ ಚೆನ್ನಮ್ಮ ವೇಷಧಾರಿಗಳಾಗಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಮೇಯರ್ ಎಂ.ಜೆ.ರವಿಕುಮಾರ್,ಶಾಸಕ ವಾಸು, ಜಿ.ಪಂ.ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮ್ಮದ್, ಜಿ.ಪಂ.ಮಾಜಿ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್, ಪೇಂಟ್ ಅಂಡ್ ವಾರ್ನಿಷ್ ಅಧ್ಯಕ್ಷ ಎಚ್.ಎ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News