ಪ್ರಾಥಮಿಕ ಶಿಕ್ಷಣದಲ್ಲೇ ರಂಗ ಶಿಕ್ಷಣ ಅಗತ್ಯ : ಸಂವಾದದಲ್ಲಿ ಮಂಡ್ಯ ರಮೇಶ್ ಪ್ರತಿಪಾದನೆ

Update: 2017-10-23 16:45 GMT

ಮಂಡ್ಯ, ಅ.23: ರಂಗಕಲೆ ಉಳಿವಿಗೆ ಹಾಗೂ ಜೀವನದ ಅನುಭವ ತಿಳಿಯಲು ಪ್ರಾಥಮಿಕ ಶಿಕ್ಷಣದಿಂದಲೇ ರಂಗಕಲೆಯ ತರಗತಿಗಳನ್ನು ಪ್ರಾರಂಭಿಸಬೇಕಿದೆ ಎಂದು ರಂಗಕರ್ಮಿ, ನಟ ಮಂಡ್ಯ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಶಿಕ್ಷಣದಲ್ಲಿ ರಂಗಕಲೆ ತರಗತಿ ಇದ್ದರೆ ಮಕ್ಕಳಲ್ಲಿ ರಂಗ ಕಲೆಯ ಬಗ್ಗೆ ಆಸಕ್ತಿ ಬೆಳೆಸಬಹುದು ಎಂದರು.

ನಟನೆ ಎಲ್ಲರಿಗೂ ಬರುವುದಿಲ್ಲ. ಅದರಲ್ಲಿ ಸಂತøಪ್ತಿಯಾಗಿ ತೊಡಗಿಸಿಕೊಂಡು ಸತತ ಪ್ರಯತ್ನ ಮಾಡಿ ಕರಗತ ಮಾಡಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ನಮ್ಮ ಸಂಸ್ಕೃತಿ, ನೆಲದ ಪರಿಚಯದ ಬಗ್ಗೆ ತಿಳಿಸಲು ರಂಗಕಲೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ರಂಗ ತರಬೇತಿ ಶಾಲೆಯನ್ನು ತೆರೆಯುವ ಎಲ್ಲ ಅವಕಾಶಗಳಿವೆ. ಒಂದಷ್ಟು ಜನರು ಇದರಲ್ಲಿ ತೊಡಗಿಸಿಕೊಳ್ಳಬೇಕು. ಬಹಳಷ್ಟು ಕನ್ನಡ ಸಿನಿಮಾಗಳಿಗೆ ಮಂಡ್ಯದ ಸೊಗಡಿನ ಕಥೆಗಳನ್ನೇ ಬಳಸಿಕೊಳ್ಳಲಾಗಿದೆ. ಜಿಲ್ಲೆಯ ಜಾನಪದ ಕ್ಷೇತ್ರ ರಂಗಭೂಮಿಗೆ ಪೂರಕವಾಗಿ ಸ್ಪಂದಿಸಿದೆ ಎಂದು ಅವರು ತಿಳಿಸಿದರು.

ಎಲ್ಲಾ ಜಿಲ್ಲೆಗಳಲ್ಲಿಯೂ ರಂಗಾಯಣ ತೆರೆಯಬೇಕಿದೆ ಎಂದು ಪ್ರತಿಪಾದಿಸಿದ ರಮೇಶ್, ಮಂಡ್ಯ ಜಿಲ್ಲೆಯಿಂದ ನೀನಾಸಂಗೆ ತರಬೇತಿಗೆ ಮೊದಲು ಹೋಗಿದ್ದು ನಾನೇ. ಸಿನಿಮಾ ಅಭಿನಯ ವೃತ್ತಿಯಾದರೆ, ರಂಗಭೂಮಿ ನನ್ನ ಉಸಿರು ಎಂದರು.

ರಂಗಭೂಮಿಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಮೈಸೂರಿನಲ್ಲಿ ನಟನಾ ರಂಗ ತರಬೇತಿ ಶಾಲೆಯನ್ನು ತೆರೆದಿದ್ದೇನೆ. ನನ್ನ ದುಡಿಮೆಯ ಹಣ, ಸರಕಾರದ ಸಹಾಯವನ್ನು ಪಡೆದು ನಟನಾ ರಂಗಭೂಮಿ ಶಾಲೆಯನ್ನು ತೆರೆದಿದ್ದೇನೆ. ನಾನು ಆರ್ಥಿಕವಾಗಿ ದುರ್ಬಲವಾಗಿದ್ದರೂ ಮಾನಸಿಕವಾಗಿ ತುಂಬಾ ಸಂತೋಷವಾಗಿದ್ದೇನೆ ಎಂದು ಹೇಳಿಕೊಂಡರು.

ಟಿವಿ ಮುಂದೆ ಕೂತು ದಪ್ಪಗಾಗುವ ಮಕ್ಕಳಿಗೆ ಬದುಕಿನ ತಲ್ಲಣ, ನೋವು ಗೊತ್ತಿಲ್ಲ. ಎಷ್ಟೋ ಮಕ್ಕಳಿಗೆ ಬಡತನದ ಹರಿವಿಲ್ಲ. ನೋವು, ಅಸಹಾಯಕತೆಯ ಬಗ್ಗೆಯೂ ಗೊತ್ತಿಲ್ಲ. ಮಂಕ್ರಿ, ನೇಗಿಲು ಏನು ಎಂಬುದು ಗೊತ್ತಿಲ್ಲ. ತೆಂಗಿನ ಕಾಯಿ ಭೂಮಿಯಲ್ಲಿ ಬೆಳೆಯುತ್ತದೆ. ಭತ್ತ ಎಲ್ಲಿಂದ ಬರುವುದೆಂಬುದೇ ತಿಳಿದಿಲ್ಲ. ನಾಟಕದ ಮೂಲಕ ಬದುಕು ಕಟ್ಟುವ ಉದ್ದೇಶ ನನ್ನದಾಗಿದೆ. ಆ ನಿಟ್ಟಿನಲ್ಲಿ ನಟನಾ ತರಬೇತಿ ಶಾಲೆ ನಡೆಯುತ್ತದೆ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಸೋಮಶೇಖರ್ ಕೆರಗೋಡು, ಪ್ರಧಾನ ಕಾರ್ಯದರ್ಶಿ ಕೆ.ಸಿ.ಮಂಜುನಾಥ, ರಾಜ್ಯ ಸಂಘದ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಡಿ.ಎಲ್. ಲಿಂಗರಾಜು, ನವೀನ್, ಬಿ.ಪಿ.ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News