ಜಿಎಸ್‌ಟಿ, ನೋಟು ನಿಷೇಧದಿಂದ ವಿವಾಹ ವೆಚ್ಚದಲ್ಲಿ ಹೆಚ್ಚಳ

Update: 2017-10-23 17:35 GMT

ಹೊಸದಿಲ್ಲಿ, ಆ. 21: ನಗದು ಅಪಮೌಲ್ಯೀಕರಣ ಹಾಗೂ ಸರಕು ಹಾಗೂ ಸೇವಾ ತೆರಿಗೆ ಕಾರಣದಿಂದ (ಜಿಎಸ್‌ಟಿ) ವಿವಾಹದ ವೆಚ್ಚದಲ್ಲಿ ಶೇ. 10ರಿಂದ 15 ಏರಿಕೆಯಾಗಲಿದೆ.

 ಜಿಎಸ್‌ಟಿ ಹಾಗೂ ನಗದು ಅಪಮೌಲ್ಯೀಕರಣ ವಿವಾಹ ಉದ್ಯಾನ, ಸಭಾಭವನ, ಟೆಂಟ್ ಕಾಯ್ದಿರಿಸುವುದು, ಸಿಹಿ ತಿಂಡಿ ಪೂರೈಕೆ ಹಾಗೂ ಫೋಟೊಗ್ರಾಫಿಯಂತಹ ವಿವಾಹಕ್ಕೆ ಸಂಬಂಧಿಸಿದ ಸೇವೆಯ ಮೇಲೆ ನಿರ್ದಿಷ್ಟವಾಗಿ ಪರಿಣಾಮ ಬೀರಬಹುದು ಎಂದು ಇಂಡಸ್ಟ್ರಿ ಚೇಂಬರ್ ಅಸೊಚಾಮ್ ಅಧ್ಯಯನ ತಿಳಿಸಿದೆ.

ಮುಂಬರುವ ವಿವಾಹ ಕಾಲದಲ್ಲಿ ಆಭರಣ, ಬಟ್ಟೆಬರೆ, ಸಲೂನ್, ಬ್ಯೂಟಿಪಾರ್ಲರ್, ಫೋಟೊಗ್ರಾಫಿ, ಹೊಟೇಲ್, ಸಭಾಭವನ, ಕೊರಿಯರ್ ಹಾಗೂ ಇತರ ವಿವಾಹ ಸಂಬಂಧಿತ ಸೇವೆಗಳ ಮೇಲೆ ಕೂಡ ಜಿಎಸ್‌ಟಿ ಹಾಗೂ ನಗದು ಅಪವೌಲ್ಯೀಕರಣ ಪ್ರಭಾವ ಬೀರಲಿದೆ.

ಶಾಪಿಂಗ್, ಟೆಂಟ್ ಕಾಯ್ದಿರಿಸುವಿಕೆ, ಆಹಾರ ಸೇವೆ ಮೊದಲಾದ ವಿವಾಹ ಸಮಾರಂಭದ ಸೇವೆಗಳ ಶುಲ್ಕ ಜಿಎಸ್‌ಟಿ ಕಾರಣಕ್ಕೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಚಿನ್ನ ಹಾಗೂ ವಜ್ರದ ಆಭರಣಗಳ ಮೇಲಿನ ತೆರಿಗೆ ಜಿಎಸ್‌ಟಿಯಿಂದಾಗಿ ಶೇ. 1.6ರಿಂದ ಶೇ. 3ರ ವರೆಗೆ ಏರಿಕೆಯಾಗಲಿದೆ. ಪಂಚತಾರ ಹೊಟೇಲ್‌ಗಳನ್ನು ಮುಂಗಡ ಕಾಯ್ದಿರಿಸುವಿಕೆ ವೆಚ್ಚ ಜಿಎಸ್‌ಟಿ ಯಿಂದಾಗಿ ಶೇ. 28ರಷ್ಟು ಹೆಚ್ಚಾಗಲಿದೆ.

 ಕಾರ್ಯಕ್ರಮ ನಿರ್ವಹಣಾ ಸೇವೆಯಲ್ಲಿ ವೆಚ್ಚದ ಮೇಲೆ ಹೆಚ್ಚುವರಿಯಾಗಿ ಶೇ. 18 ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ವಿವಾಹ ಗಾರ್ಡನ್ ಹಾಗೂ ಸಭಾಭವನ ಮುಂಗಡ ಕಾಯ್ದಿರಿಸುವಿಕೆಯಲ್ಲಿ ಶೇ. 18 ಜಿಎಸ್‌ಟಿ ನೀಡಬೇಕಾಗಬಹುದು.

ಈ ಎಲ್ಲ ಸೇವೆಗಳ ಜಿಎಸ್‌ಟಿ ದರ ಶೇ. 18ರಿಂದ 28. ಜಿಎಸ್‌ಟಿ ಮೊದಲು ಟೆಂಟ್ ಸೇವೆ, ಸಿಹಿತಿಂಡಿ ಕಾಯ್ದಿರಿಸುವಿಕೆಯಂತಹ ಹೆಚ್ಚಿನ ವಿವಾಹ ಸೇವಾ ವ್ಯವಹಾರಗಳಿಗೆ ನೋಂದಣಿಯಾಗದ ಬಿಲ್ ಬಳಸಲಾಗುತ್ತಿತ್ತು. ಅವರು ಯಾವುದೇ ತೆರಿಗೆ ನೀಡುತ್ತಿರಲಿಲ್ಲ ಎಂದು ಅಧ್ಯಯನ ಹೇಳಿದೆ.

ನಗದು ಮೊತ್ತದ ಅಲಭ್ಯತೆ ಕಾರಣದಿಂದ ಹೆಚ್ಚಿನ ಜನರು ವಿವಾಹಕ್ಕೆ ಬೇಕಾದ ದಿನಸಿ ಹಾಗೂ ಇತರ ವಸ್ತುಗಳನ್ನು ಖರೀದಿಸಿ ಬಿಲ್ ಪಾವತಿ ಬಾಕಿ ಇರಿಸಲು ಆದ್ಯತೆ ನೀಡುತ್ತಿದ್ದರು. ಆದರೆ, ಜಿಎಸ್‌ಟಿಯಿಂದಾಗಿ ವ್ಯಾಪಾರಿಗಳು ಬಿಲ್ ಪಾವತಿ ಬಾಕಿ ಇರಿಸಲು ಅವಕಾಶ ನೀಡಲಾರರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News