ಶಿವಮೊಗ್ಗ ; ಪೊಲೀಸರ ಮೇಲೆ ಕಲ್ಲು ತೂರಾಟ ಪ್ರಕರಣ :ಆರು ಜನರ ಬಂಧನ

Update: 2017-10-23 18:10 GMT

ಶಿವಮೊಗ್ಗ, ಅ.23: ಜಿಲ್ಲೆಯ ಸೊರಬ ತಾಲೂಕಿನ ಜಡೆ ಗ್ರಾಮದಲ್ಲಿ ರವಿವಾರ ಹೋರಿ ಬೆದರಿಸುವ ಸ್ಪರ್ಧೆಗೆ ಮುಂದಾಗಿದ್ದ ಹಾಗೂ ಸ್ಪರ್ಧೆ ತಡೆಗಟ್ಟಲು ಮುಂದಾದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದ ಆರೋಪದ ಮೇರೆಗೆ ಪೊಲೀಸು ಆರು ಆಪಾದಿತರನ್ನು ಬಂಧಿಸಿದ್ದಾರೆ.

ರುದ್ರೇಗೌಡ, ಶಿವಪುತ್ರಪ್ಪ, ಕೊಟ್ರೇಶ್, ಅಶೋಕ್, ಪ್ರವೀಣ್ ಹಾಗೂ ಮಹೇಂದ್ರ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳ ಸೆರೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.

ಈ ನಡುವೆ ಜಡೆ ಗ್ರಾಮದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಬಂಧನ ಭೀತಿಯಿಂದ ಕೆಲ ಪುರುಷರು ಮನೆ ತೊರೆದಿರುವ ಮಾಹಿತಿ ಕೇಳಿಬಂದಿದೆ. ಗ್ರಾಮದಲ್ಲಿ ಪೊಲೀಸ್ ಭದ್ರತೆ ಮುಂದುವರಿಸಲಾಗಿದೆ. ಸೋಮವಾರ ಇನಸ್ಪೆಕ್ಟರ್ ಉಮಾಪತಿ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ರವಿವಾರ ಜಡೆ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಪೊಲೀಸರು ಸ್ಪರ್ಧೆ ಆಯೋಜಿಸದಂತೆ ಸೂಚಿಸಿದ್ದರು. ಇದರ ಹೊರತಾಗಿಯೂ ಕೆಲವರು ಸ್ಪರ್ಧೆ ನಡೆಸಲು ಮುಂದಾಗಿದ್ದರು. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ತದನಂತರ ಪೊಲೀಸರು ಲಾಠಿ ಪ್ರಹಾರ ನಡೆಸಿಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು.

ತಡೆ: ಈ ನಡುವೆ ಸೋಮವಾರ ಸೊರಬ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿಯೂ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಇನ್‌ಸ್ಪೆಕ್ಟರ್ ಉಮಾಪತಿ ನೇತೃತ್ವದ ಪೊಲೀಸ್ ತಂಡವು ಸ್ಪರ್ಧೆ ನಡೆಸ ದಂತೆ ಗ್ರಾಮಸ್ಥರಿಗೆ ಸೂಚಿಸಿತು. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿತು.

ಇದರಿಂದ ಯಲವಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆ ರದ್ದುಗೊಳಿಸಲಾಗಿದೆ. ಪೊಲೀಸರ ಕ್ರಮದಿಂದ ಆಕ್ರೋಶಗೊಂಡ ಕೆಲ ಗ್ರಾಮಸ್ಥರು ಸೊರಬ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಹೋರಿ ಬೆದರಿಸುವ ಸ್ಪರ್ಧೆಗೆ ಅನುಮತಿ ನೀಡಬೇಕು ಎಂದು ತಾಲೂಕು ಆಳಿತಕ್ಕೆ ಮನವಿ ಪತ್ರ ಅರ್ಪಿಸಿದ್ದಾರೆ.

ಆಸ್ಪತ್ರೆಗೆ ದಾಖಲು: ಈ ನಡುವೆ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಹಾಗೂ ಶಿಕಾರಿಪುರ ತಾಲೂಕು ಬೇಗೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಗಳ ವೇಳೆ ಹೋರಿ ತಿವಿತದಿಂದ ತಲಾ ಒರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. ಪೊಲೀಸರ ಕಟ್ಟುನಿಟ್ಟಿನ ನಿರ್ಬಂಧದ ನಡುವೆಯೂ ಕೆಲ ಗ್ರಾಮಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗುತಿ್ತರುವ ಮಾಹಿತಿಗಳು ಕೇಳಿಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News