ಮನವೇ ಸರ್ಪ

Update: 2017-10-23 18:36 GMT

ಮನವೇ ಸರ್ಪ, ತನು ಹೇಳಿಗೆ
ಹಾವಿನೊಡತಣ ಹುದುವಾಳಿಗೆ,
ಇನ್ನಾವಾಗ ಕೊಂದಹುದೆಂದರಿಯೆ,
ಇನ್ನಾವಾಗ ತಿಂದಹುದೆಂದರಿಯೆ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೆ ಗಾರುಡ ಕೂಡಲಸಂಗಮದೇವಾ.
                                - ಬಸವಣ್ಣ

ಮನವು ಸರ್ಪವಿದ್ದಂತೆ. ಅದು ತೀಕ್ಷ್ಣವಾಗಿದೆ, ವಿಷಕಾರಿಯೂ ಆಗಿದೆ. ಅದಕ್ಕೆ ವೇಗದ ಗತಿ ಇದೆ. ಅದು ಎತ್ತ ಸಾಗುವುದೊ ಗೊತ್ತಿಲ್ಲ. ಅದು ಆಕರ್ಷಕವೂ ಆಗಿದೆ. ಅದು ಹೇಗೆ ಬೇಕೋ ಹಾಗೆ ಹೊರಳಬಲ್ಲುದು. ಎಲ್ಲಿ ಬೇಕೆಂದರಲ್ಲಿ ನುಸುಳಬಲ್ಲುದು. ನಮ್ಮಿಳಗೇ ಇದ್ದು ನಮ್ಮನ್ನು ಕಚ್ಚಬಲ್ಲುದು. ಕೊಲ್ಲಲೂ ಬಹುದು. ಹೀಗೆ ಸರ್ಪದ ಕಾವ್ಯಪ್ರತಿಮಾ ವಿಧಾನದೊಂದಿಗೆ ಬಸವಣ್ಣನವರು ಮನಸ್ಸಿನ ಸ್ವರೂಪವನ್ನು ತಿಳಿಸುತ್ತಾರೆ.

ನಮ್ಮ ಮನಸ್ಸು ಹಾವಾದರೆ ದೇಹವೇ ಹಾವಿನ ಬುಟ್ಟಿಯಾಗಿದೆ. ನಮ್ಮ ಸಹವಾಸವನ್ನು ಬಯಸುವ ಈ ಹಾವಿನೊಂದಿಗೆ ಬಾಳುವುದು ಅನಿವಾರ್ಯವಾಗಿದೆ. ಅದು ನಮ್ಮನ್ನು ಯಾವಾಗ ಕೊಲ್ಲುವುದೋ ಗೊತ್ತಿಲ್ಲ. ಮನಸ್ಸು ಹೇಳಿದಂತೆ ಕೇಳುತ್ತ ಹೋದರೆ ಎಲ್ಲಿಗೆ ತಲುಪುವೆವೋ ಗೊತ್ತಿಲ್ಲ. ಎಂಥ ಅಪಮಾನಕ್ಕೆ ಒಳಗಾಗುವೆವೋ ಗೊತ್ತಿಲ್ಲ. ಯಾರಿಂದ ಛೀಮಾರಿ ಹಾಕಿಸಿಕೊಳ್ಳುವೆವೋ ಗೊತ್ತಿಲ್ಲ. ಮನಸ್ಸು ಅರಿಯದ ಪಾಪ ಇಲ್ಲ ಎಂದು ಪ್ರಭುದೇವರು ಹೇಳುತ್ತಾರೆ. ಮನಸ್ಸು ಎಂಬುದು ಎಲ್ಲ ಪಾಪಗಳ ಜೊತೆ ಆನಂದದಿಂದ ಇರಬಲ್ಲುದು. ನಾವು ಎಲ್ಲ ರೀತಿಯ ಪಾಪಗಳನ್ನು ಮಾಡುವಂತೆ ಪ್ರೇರೇಪಿಸಬಲ್ಲುದು. ಅದು ನಮ್ಮನ್ನು ನರಕದ ಹೆಬ್ಬಾಗಿಲಿಗೆ ಒಯ್ದು ಕೊಂದುಹಾಕಬಲ್ಲುದು. ನಮ್ಮ ಪ್ರವೃತ್ತಿಗಳು ಗರಿಗೆದರುವಂತೆ ಮಾಡಬಲ್ಲುದು. ಎಲ್ಲ ರೀತಿಯ ನೈತಿಕ ಪ್ರಜ್ಞೆ ಮತ್ತು ಸಾಮಾಜಿಕ ಕಟ್ಟಳೆಗಳ ಭಯವನ್ನು ನಾವು ದಾಟುವಂತೆ ಮಾಡಬಲ್ಲುದು. ನಾಚಿಕೆಗೆಟ್ಟು ವರ್ತಿಸುವಂತೆ ಪ್ರೇರೇಪಿಸಬಲ್ಲುದು. ನಮ್ಮನ್ನು ಕಚ್ಚುತ್ತ ನಾವು ವ್ಯಕ್ತಿತ್ವಹರಣ ಮಾಡಿಕೊಂಡು ಸಾಯುವ ಸ್ಥಿತಿಗೆ ತಲುಪುವಂತೆ ನೋಡಿಕೊಳ್ಳಬಲ್ಲುದು. ಹೀಗೆ ಬಸವಣ್ಣನವರು ಮನಸ್ಸಿನ ಭಯಾನಕ ಸ್ವರೂಪದ ಕುರಿತು ಎಚ್ಚರಿಸುತ್ತಾರೆ. ಈ ಎಚ್ಚರಿಕೆಯಿಂದ ನಾವು ಗಾಬರಿಗೊಳ್ಳುತ್ತೇವೆ ಎಂಬುದೂ ಅವರಿಗೆ ಗೊತ್ತಿದೆ. ಆದ್ದರಿಂದ ಅವರು ಅಭಯವಚನವನ್ನೂ ನೀಡುತ್ತಾರೆ. ಸರ್ಪಾಸ್ತ್ರವನ್ನು ಎದುರಿಸಲು ಗರುಡಾಸ್ತ್ರವನ್ನು ಕೊಡುತ್ತಾರೆ. ನಿರಂತರವಾಗಿ ಕೂಡಲಸಂಗಮದೇವನನ್ನು ಪೂಜಿಸುವುದೇ ಗರುಡಾಸ್ತ್ರ. ಈ ಗರುಡಾಸ್ತ್ರದಿಂದ ಮನಸ್ಸೆಂಬ ಸರ್ಪಾಸ್ತ್ರವನ್ನು ಎದುರಿಸಲು ಸಾಧ್ಯ. ಹೀಗೆ ದೇವರ ಧ್ಯಾನದಲ್ಲಿ ಮಾನವ ಅದಮ್ಯವಾದ ಶಕ್ತಿಯನ್ನು ಪಡೆಯುವನು. ಮನಸ್ಸಿನ ಮೇಲೆ ಹಿಡಿತ ಸಾಧಿಸುವನು.

ವಸ್ತುಮೋಹದಿಂದಾಗಿ ಮನಸ್ಸು ಚಂಚಲಗೊಳ್ಳುವುದು ಸಹಜವಾಗಿದೆ. ಆ ಚಂಚಲ ಮನಸ್ಸು ವಿಷಕಾರಿಯಾಗುವುದರಲ್ಲಿ ಸಂಶಯವಿಲ್ಲ. ಇಂಥ ಮನಸ್ಸಿಗೆ ಐಹಿಕ ಆಸೆಯ ವಿಷದ ಹಲ್ಲುಗಳಿರುತ್ತವೆ. ‘ಹಲ್ಲ ತೆಗೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೆ ಲೇಸು’ ಎಂದು ಅಕ್ಕ ಮಹಾದೇವಿ ಹೇಳುತ್ತಾಳೆ. ವಿಷದ ಹಲ್ಲುಗಳನ್ನು ಕಳೆದುಕೊಂಡ ಹಾವು ಯಾವುದೇ ರೀತಿಯ ಹಾನಿಯನ್ನುಂಟು ಮಾಡಲು ಸಾಧ್ಯವಿಲ್ಲ. ಆಗ ಅದರ ಒಡನಾಟ ಆಕರ್ಷಕವಾಗಿರುತ್ತದೆ. ಅದರ ಜೊತೆ ಆಟವಾಡುವವರಿಗೆ ಯಾವುದೇ ಭಯವಿರುವುದಿಲ್ಲ. ಆದರೆ ದೇವರ ಧ್ಯಾನವೆಂಬ ಗಾರುಡ ಶಕ್ತಿಯಿಂದ ಮಾತ್ರ ಮನಸ್ಸಿನ ವಿಷದ ಹಲ್ಲುಗಳನ್ನು ತೆಗೆಯಲು ಸಾಧ್ಯ. ಹೀಗೆ ಮಾಡದಿದ್ದರೆ ಕಂಡದ್ದನ್ನೆಲ್ಲ ಪಡೆಯಬೇಕೆಂಬ ಮನಸ್ಸು ಎಲ್ಲ ರೀತಿಯ ಐಹಿಕ ಆಸೆಗಳನ್ನು ಸೃಷ್ಟಿಸುತ್ತಲೇ ಇರುತ್ತದೆ. ದಾಹದಿಂದಾಗಿ ಮನಸ್ಸಿನ ದಬ್ಬಾಳಿಕೆಗೆ ಒಳಗಾಗುತ್ತಲೇ ಇರುತ್ತೇವೆ. ಕೊನೆಗೆ ನರಳುತ್ತಲೇ ಇರುತ್ತೇವೆ. ಆದ್ದರಿಂದ ಮಾನವರು ಮನಸ್ಸೆಂಬ ಹಾವನ್ನು ಹತೋಟಿಯಲ್ಲಿಡಲು ದೇವರ ಧ್ಯಾನದ ಮೂಲಕ ಗಾರುಡ ಶಕ್ತಿಯನ್ನು ಪಡೆದುಕೊಳ್ಳಬೇಕು ಎಂದು ಬಸವಣ್ಣನವರು ಸೂಚಿಸುತ್ತಾರೆ.

ಬಸವಣ್ಣನವರು ಐಹಿಕ ಜಗತ್ತನ್ನು ತಿರಸ್ಕರಿಸುವುದಿಲ್ಲ. ಆದರೆ ಐಹಿಕ ಜಗತ್ತಿನಲ್ಲಿ ಹೇಗೆ ಇರಬೇಕು ಎಂಬುದನ್ನು ತಿಳಿಸುತ್ತಾರೆ. ಹುಲ್ಲು, ಹೂವು, ನೀರು, ಗಾಳಿ, ಬೆಳಕು ಮುಂತಾದವುಗಳೆಲ್ಲ ತಮ್ಮ ತಮ್ಮ ಮಹತ್ವವನ್ನು ಹೊಂದಿವೆ. ಆದರೆ ಅನೇಕರಿಗೆ ಇವುಗಳ ಮಹತ್ವವೇ ತಿಳಿಯುವುದಿಲ್ಲ. ಅವರಿಗೆ ನಗ ನಾಣ್ಯ ಮತ್ತು ಭೂಸಂಪತ್ತೆಂಬ ವಸ್ತುಮೋಹ ಮುಖ್ಯವಾಗುತ್ತದೆ. ಇಂಥ ಸಂಪತ್ತಿನ ಶೇಖರಣೆಯಲ್ಲೇ ಇಡೀ ಜೀವನ ಕಳೆಯುತ್ತಾರೆ. ಮನಸ್ಸನ್ನು ಹರಿಬಿಟ್ಟಷ್ಟೂ ಅದು ಇಂಥ ಸಂಪತ್ತಿನ ಕಡೆಗೆ ಓಡುತ್ತದೆ. ಅವರು ಸೂರ್ಯೋದಯ, ಚಂದ್ರೋದಯ, ಉಕ್ಕೇರುವ ಸಮುದ್ರ, ಹರಿವ ನದಿ, ಹಕ್ಕಿಗಳ ಕಲರವ, ಬೀಸುವ ತಂಗಾಳಿ, ಹಸಿವನ್ನು ಇಂಗಿಸುವ ತುತ್ತು ಅನ್ನ ಮತ್ತು ನೀರಡಿಕೆಯನ್ನು ಹೋಗಲಾಡಿಸುವ ಬೊಗಸೆ ನೀರಿನ ಮಹತ್ವವನ್ನೇ ಅರಿಯದಂತೆ ಮಾಡುತ್ತದೆ. ‘ಜಗತ್ತಿನ ಎಲ್ಲ ವಸ್ತುಗಳು ಎಲ್ಲರಿಗೂ ಸೇರಿದ್ದು’ ಎಂಬ ಸತ್ಯವನ್ನು ಮರೆಮಾಚುತ್ತದೆ.

 ಇಂಥ ಮನಸ್ಸೆಂಬ ವಿಷಸರ್ಪವನ್ನು ಮಾನವ ಹತೋಟಿಯಲ್ಲಿಟ್ಟುಕೊಳ್ಳಬೇಕಾದರೆ ಗಾರುಡ ಶಕ್ತಿಯನ್ನು ಪಡೆಯಬೇಕಾಗುತ್ತದೆ. ಇಂಥ ವಿಷಸರ್ಪವನ್ನು ಗಾರುಡ ಶಕ್ತಿಯಿಂದ ಮಾತ್ರ ಹತೋಟಿಯಲಿಟ್ಟುಕೊಳ್ಳಲು ಸಾಧ್ಯ. ‘ಇಷ್ಟಲಿಂಗ ಪೂಜೆ’ ಎಂಬ ಶಿವಯೋಗದಿಂದ ಶರಣರು ಇಂಥ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಗಾರುಡ ಶಕ್ತಿಯನ್ನು ಪಡೆದರು.

ಶಿವಯೋಗದಿಂದ ಅಂದರೆ ಮಂಗಳಕರವಾದುದರ ಜೊತೆಗೆ ಮನಸ್ಸನ್ನು ಕೂಡಿಸುವುದರಿಂದ ಅದು ನಮ್ಮ ಅಧೀನದಲ್ಲಿರುತ್ತದೆ. ಆಗ ಜಗತ್ತಿನ ಪ್ರತಿಯೊಂದು ವಸ್ತುವಿನ ಮಹತ್ವವನ್ನು ಅರಿಯಲು ಸಾಧ್ಯವಾಗುವುದು. ಅಷ್ಟೇ ಅಲ್ಲದೆ ‘ಜಗತ್ತಿನ ಪ್ರತಿಯೊಂದು ವಸ್ತು ಪ್ರತಿಯೊಂದು ಜೀವಿಗೂ ಸೇರಿದ್ದು’ ಎಂಬ ಪ್ರಜ್ಞೆ ಮೂಡುವುದು. ಇಂಥ ‘ಅಲೌಕಿಕ ಅರಿವು ಮತ್ತು ಲೌಕಿಕ ಪ್ರಜ್ಞೆ’ಯಿಂದ ಮಾನವ ಸಹಜವಾಗಿಯೇ ವಿಶ್ವಮಾನವನಾಗುತ್ತಾನೆ. ಶರಣರು ಹೀಗೆ ವಿಶ್ವಮಾನವರಾದವರು.

ಶರಣರು ಸದಾ ಮಂಗಲಮಯವಾದ ಮನಸ್ಸು ಉಳ್ಳವರಾಗಿದ್ದರು. ಈ ಜಗತ್ತಿನ ಪ್ರತಿಯೊಂದು ವಸ್ತುವನ್ನು ಲೋಕಕಲ್ಯಾಣಕ್ಕೆ ಬಳಸುವುದಕ್ಕಾಗಿ ಪಣ ತೊಟ್ಟಿದ್ದರು. ಹೀಗಾಗಿ ಅವರಿಗೆ ಪ್ರತಿಯೊಂದು ವಸ್ತುವಿನ ಬಗ್ಗೆ ಕಾಳಜಿ ಇತ್ತು. ಆದರೆ ಯಾವ ವಸ್ತುವನ್ನೂ ಅವರು ತಮಗಾಗಿ ಆಸೆ ಪಡಲಿಲ್ಲ. ‘ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ.... ಕೂಡಲಸಂಗಮದೇವಾ’ ಎಂದು ಬಸವಣ್ಣನವರು ಹೇಳಿದ್ದಾರೆ. ಹೀಗೆ ಶಿವಯೋಗವೆಂಬ ಗಾರುಡ ಶಕ್ತಿಯಿಂದ ವಸ್ತುಮೋಹಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡಿದ್ದ ಬಸವಣ್ಣನವರು ಲೋಕದಲ್ಲಿನ ಪ್ರತಿಯೊಂದು ವಸ್ತು ಯಾವುದೇ ವ್ಯಕ್ತಿಗೆ ಸೇರದೆ ಇಡೀ ಲೋಕದ ಜೀವಿಗಳಿಗೆ ಸೇರಿದ್ದು ಎಂಬ ಮಹಾನ್ ತತ್ತ್ವವನ್ನು ಸಾರಿದ್ದಾರೆ.

ಈ ರೀತಿಯಲ್ಲಿ ನಮ್ಮಳಗೆ ಸಮತೆಯನ್ನು ಸಾಧಿಸಿದಾಗ ಮಾತ್ರ ಜಗತ್ತಿನಲ್ಲಿ ಸಮತೆಯನ್ನು ಸಾಧಿಸಲು ಸಾಧ್ಯ. ಇಲ್ಲದಿದ್ದರೆ ವಸ್ತುಮೋಹದಿಂದ ಜಗತ್ತಿಗೆ ಹಾನಿಯಾಗುವುದರ ಜೊತೆಗೆ ನಾವೂ ಅದಕ್ಕೆ ಬಲಿಯಾಗುತ್ತೇವೆ. ಎಲ್ಲವೂ ಲೋಕದ ಆಸ್ತಿ ಎಂದು ಭಾವಿಸಿ ಆ ಪ್ರಕಾರ ಬದುಕಿದಾಗ ನಮಗೆ ಆತ್ಮತೃಪ್ತಿಯಾಗುವುದು ಮತ್ತು ಲೋಕವೆಲ್ಲ ಆನಂದಮಯವಾಗಿರುವುದು.

***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News