ಕೋಮುಗಲಭೆ ಸೃಷ್ಟಿಸಲು ಬಿಜೆಪಿ ನಾಯಕರ ಹುನ್ನಾರ: ಸರ್ದಾರ್ ಅಹ್ಮದ್ ಖುರೇಷಿ
ಬೆಂಗಳೂರು, ಅ.24: ಟಿಪ್ಪು ವಿರುದ್ಧ ಮದಕರಿ ನಾಯಕನನ್ನು ಎತ್ತಿಕಟ್ಟುವ ಮೂಲಕ ಬಿಜೆಪಿ ನಾಯಕರು ಕೋಮು ಗಲಭೆ ಸೃಷ್ಟಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ಹಝ್ರತ್ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಷಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತಿಹಾಸ ತಿಳಿಯದೆ ಇತ್ತೀಚಿಗೆ ಸುದ್ದಿವಾಹಿನಿಯ ಚರ್ಚೆಯಲ್ಲಿ ಟಿಪ್ಪು ಸುಲ್ತಾನರನ್ನು ಚಿತ್ರದುರ್ಗದ ಪಾಳೆಯಗಾರ ಮದಕರಿ ನಾಯಕನಿಗೆ ಎತ್ತಿ ಕಟ್ಟುವ ಮೂಲಕ ಕೋಮು1ಗಲಭೆ ಸೃಷ್ಟಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ತಂತ್ರ ರೂಪಿಸಿದೆ. ಹಿಂದು-ಮುಸ್ಲಿಂ ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶದಿಂದ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಟಿಪ್ಪು ಸುಲ್ತಾನರಿಗೂ ಮದಕರಿ ನಾಯಕರಿಗೂ ಯಾವುದೇ ವೈಷಮ್ಯವಾಗಲಿ ಅಥವಾ ಯುದ್ಧವಾಗಲಿ ನಡೆದ ದಾಖಲೆಯಿಲ್ಲ. ಆದರೆ, ಬಿಜೆಪಿ ನಾಯಕರು ಟಿಪ್ಪು ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ, 18 ನೆ ಶತಮಾನದಲ್ಲಿ ಕನ್ನಡಿಗರ ಮತ್ತು ಮೈಸೂರು ಸಂಸ್ಥಾನದ ಕಟು ವೈರಿಯಾಗಿ ಮರಾಠರು ಮತ್ತು ಬ್ರಿಟಿಷರು ವಸಾಹತುಶಾಹಿಗಳ ಪರವಾಗಿ ನಿಂತಿದ್ದು ಮದಕರಿನಾಯಕ. ಆದರೆ, ಸುಳ್ಳು ಸುದ್ದಿ ಜನರಿಗೆ ತಲುಪಿಸಿ, ಟಿಪ್ಪು ವಿರುದ್ಧ ದಾಖಲೆಯಿಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಾಹಿತಿ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಭಾರತದ ದಕ್ಷಿಣ ಪ್ರಸ್ಥಭೂಮಿಯಲ್ಲಿ ವಿಶಾಲವಾದ ಕರ್ನಾಟಕ ರಾಜ್ಯದ ಭದ್ರ ಬುನಾದಿ ಹಾಕಿ, ಐಕ್ಯತೆ ಮೂಡಿಸಲು ಹರಸಾಹಸ ಪಟ್ಟಿದ್ದಾರೆ. ಮಾದರಿ ಮೈಸೂರು ಸಂಸ್ಥಾನಕ್ಕೆ ಅಡಿಗಲ್ಲು ಹಾಕಿಕೊಟ್ಟಿದ್ದಾರೆ ಎಂದರು.
ಕನ್ನಡ ನಾಡಿನ ಗೋಪಾಲಕೃಷ್ಣ ಅಡಿಗ, ಕುವೆಂಪು, ಗೋಕಾಕ್, ಮಾಸ್ತಿ, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಸೇರಿದಂತೆ ಅನೇಕರು ಸಾಹಿತಿಗಳು, ಕವಿಗಳು ತಮ್ಮ ಬರಹದ ಮೂಲಕ ಟಿಪ್ಪುರನ್ನು ಮೆಚ್ಚಿರುವ ದಾಖಲೆಗಳಿವೆ. ಅಲ್ಲದೆ, ಅವರು ರಾಜ್ಯದ 156 ಕ್ಕೂ ಅಧಿಕ ದೇವಾಲಯಗಳಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಆದರೆ, ಬಿಜೆಪಿ ನಾಯಕರು ದೇವಸ್ಥಾನಗಳನ್ನು ಧ್ವಂಸ ಮಾಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿರುವುದು ಎಷ್ಟು ಸತ್ಯ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಕ್ರಿಶ್ಚಿಯನ್ ಫೆಡರೇಶನ್‌ನ ಅಧ್ಯಕ್ಷ ರೆವರೆಂಡ್ ಮನೋಹರ್ ಚಂದ್ರ ಪ್ರಸಾದ್, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನರಸಿಂಹ ಮೂರ್ತಿ ಉಪಸ್ಥಿತರಿದ್ದರು.