ನವೆಂಬರ್‍ನಲ್ಲಿ ಸಾರ್ವಜನಿಕರಿಗೆ ಆರೋಗ್ಯ ಭಾಗ್ಯ ಒದಗಿಸಲು ಸನ್ನದ್ಧರಾಗಿ: ಅಧಿಕಾರಿಗಳಿಗೆ ರಮೇಶ್ ಕುಮಾರ್ ಸೂಚನೆ
ಮೈಸೂರು, ಅ.24: ರಾಜ್ಯಾದ್ಯಂತ ನವೆಂಬರ್ ತಿಂಗಳಲ್ಲಿ ಸಾರ್ವತ್ರಿಕ ಆರೋಗ್ಯ (ಯೂನಿವರ್ಸಲ್ ಹೆಲ್ತ್) ಯೋಜನೆ ಜಾರಿಯಾಗಲಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿ ಸಾರ್ವಜನಿಕರಿಗೆ ಆರೋಗ್ಯ ಭಾಗ್ಯ ಒದಗಿಸಲು ಸನ್ನದ್ಧರಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಆರೋಗ್ಯ ಇಲಾಖೆಯ ಮೈಸೂರು ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹಲವೆಡೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಜನರಿಕ್ ಔಷಧ ಮಳಿಗೆಗಳನ್ನು ತೆರೆಯಲು ಸೂಕ್ತ ಕ್ರಮಕೈಗೊಳ್ಳಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳು, ಕ್ಯಾಂಟೀನ್‍ಗಳನ್ನು ನಿರ್ಮಿಸಬೇಕು ಎಂದು ತಿಳಿಸಿದರು.
ಈ ವೇಳೆ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಬಸವರಾಜು ಅವರು, ಜಿಲ್ಲೆಯಲ್ಲಿ 148 ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‍ಸಿ), 9 ಸಮುದಾಯ ಆರೋಗ್ಯ ಕೇಂದ್ರ(ಸಿಎಚ್‍ಸಿ), 6 ತಾಲೂಕು ಆಸ್ಪತ್ರೆಗಳಿವೆ. ಪ್ರಯೋಗಾಲಯ ತಂತ್ರಜ್ಞರ ಕೊರತೆ ಇದ್ದು, ನೇಮಕಾತಿಗಾಗಿ ಟೆಂಡರ್ ಆಹ್ವಾನಿಸಿದ್ದರೂ ಯಾವುದೇ ಅರ್ಜಿ ಬಂದಿರಲಿಲ್ಲ. ಹಾಗಾಗಿ ಮರು ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಅವರು, ಇಂಹತ ಸಂದರ್ಭದಲ್ಲಿ ನಾವು ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಆಕರ್ಷಕ ಪ್ರೋತ್ಸಾಹಧನ ಮತ್ತಿತರ ಸೌಲಭ್ಯ ಕೊಡುವ ಬಗ್ಗೆ ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.
ಇಲಾಖೆಯಲ್ಲಿ ವೈದ್ಯರು, ಸಿಬ್ಬಂದಿ ಸೇರಿದಂತೆ 331 ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಹಿಂಜರಿಯುತ್ತಾರೆ. ಹಾಗಾಗಿ ನೇಮಕಾತಿಗಾಗಿ ಅರ್ಜಿಗಳೇ ಬರುತ್ತಿಲ್ಲ. ಜನರಿಕ್ ಔಷಧಿ ಕೇಂದ್ರಗಳು ಜಿಲ್ಲೆಯಲ್ಲಿ ನಾಲ್ಕು ಸ್ಥಳಗಳಲ್ಲಿ ಶುರುವಾಗಿವೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಮುಖ್ಯ ಕಾರ್ಯದರ್ಶಿ ಅಜಯ್ ಸೇಠ್ ಮಾತನಾಡಿ, ವಿಭಾಗ ಮಟ್ಟದಲ್ಲಿ ತಾಯಿ, ಮಕ್ಕಳ ಸಾವು ಮೈಸೂರು ಜಿಲ್ಲೆಯಲ್ಲೇ ಹೆಚ್ಚು ಸಂಭವಿಸುತ್ತಿದೆ. ಮಹಿಳೆಯರಲ್ಲಿ ಗಂಭೀರವಾದ ಅನಿಮಿಯಾ ಕಾಣಿಸಿಕೊಳ್ಳುತ್ತಿದೆ. ನಿಯಂತ್ರಿಸಲು ಕ್ರಮಕೈಗೊಳ್ಳಬೇಕು ಎಂದಾಗ, ಸಿಎಚ್‍ಸಿಗಳಲ್ಲಿ ಅನಸ್ತೇಶಿಯ ಮತ್ತು ಪ್ರಸೂತಿ ತಜ್ಞ ವೈದ್ಯರ ಕೊರತೆ ಇದೆ. ಅಲ್ಲದೆ, ಹೆಚ್ಚು ಅಪಾಯಕಾರಿ ಸ್ಥಿತಿಯಲ್ಲಿ ಗರ್ಭಿಣಿಯರನ್ನು ಕರೆತಂದ ಪ್ರಕರಣಗಳಲ್ಲಿ ಅಂಥಹದ್ದು ಸಂಭವಿಸುತ್ತಿದೆ ಎಂದು ಡಾ.ಬಿ.ಬಸವರಾಜು ಹೇಳಿದರು.
ಕೆ.ಆರ್.ಆಸ್ಪತ್ರೆ ಬಗ್ಗೆ ದೂರುಗಳಿವೆಯಲ್ಲ ಎಂದು ರಮೇಶ್ ಕುಮಾರ್ ಅವರು, ಪ್ರಶ್ನಿಸಿದಾಗ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಸ್.ಚಂದ್ರಶೇಖರ್ ಅವರು, ಐಸಿಯುನಲ್ಲಿ ವೆಂಟಿಲೇಟರ್‍ಗಳು ಸಾಕಷ್ಟು ಇಲ್ಲದ್ದರಿಂದ ಸಮಸ್ಯೆಯಾಗಿದೆ. ಸದ್ಯದಲ್ಲೇ ಅತ್ಯಾಧುನಿಕ ಐಸಿಯು ಅಳವಡಿಸಲಾಗುವುದು. ನಂತರ ಸಮಸ್ಯೆ ಪರಿಹಾರವಾಗಬಹುದು ಎಂದು ಸಮಜಾಯಿಷಿ ನೀಡಿದರು.
ಜಿಲ್ಲಾ ಕೇಂದ್ರದಿಂದ 15 ಕಿ.ಮೀ. ದೂರದಲ್ಲಿ ಪಿಎಚ್‍ಸಿ ಇರಲಿ: ಚಾಮರಾಜನಗರದಲ್ಲಿ ಜಿಲ್ಲಾ ಕೇಂದ್ರದಿಂದ 5-6 ಕಿ.ಮೀ. ದೂರದಲ್ಲಿರುವ ಕುದೇರು ಮತ್ತಿತರ ಕಡೆ ಪಿಎಚ್‍ಸಿಗಳಿದ್ದು, ನಿಷ್ಕ್ರಿಯವಾಗಿವೆ ಎಂಬದಾಗಿ ಅಲ್ಲಿನ ಡಿಎಚ್‍ಒ ಹೇಳಿದಾಗ, ರಮೇಶ್ ಕುಮಾರ್ ಅವರು, ಅಂತಹವನ್ನು ಮುಚ್ಚಿಹಾಕಿ. ಅಲ್ಲದೆ, ಜಿಲ್ಲಾ ಕೇಂದ್ರದಿಂದ 10ರಿಂದ 15 ಕಿ.ಮೀ. ದೂರದಲ್ಲಿ ಮಾತ್ರ ಪಿಎಚ್‍ಸಿಗಳನ್ನು ತೆರೆಯಿರಿ ಎಂದು ಸೂಚನೆ ನೀಡಿದರು. ಹೆರಿಗೆ ಪ್ರಕರಣಗಳು ಹೆಚ್ಚಾಗಿ ಇಲ್ಲದ ಪಿಎಚ್‍ಸಿಗಳಲ್ಲಿ 24*7 ಸೇವೆಯನ್ನು ವಾಪಸ್ ಪಡೆಯಿರಿ ಎಂದು ಸೂಚಿಸಿದರು.
ಚಾಮರಾಜನಗರದಲ್ಲಿ 3 ಪಿಎಚ್‍ಸಿಗಳಲ್ಲಿ ಅನಸ್ತೇಶಿಯ ತಜ್ಞರು ಇಲ್ಲವೆಂಬ ಮಾಹಿತಿಯಿಂದ ಅಸಮಾಧಾನಗೊಂಡ ಸಚಿವರು, ಕುಗ್ರಾಮಗಳಿಗೆ ಹೋಗಲು ಹಿಂಜರಿಯುವವರನ್ನು ಬೀದರ್, ಗುಲಬರ್ಗಾ ಜಿಲ್ಲೆಗಳಿಗೆ ವರ್ಗಾವಣೆ ಮಾಡಿ ಎಂದು ಹೇಳಿದರು.
ವಂಚಕ ಸಂಸ್ಥೆಗಳನ್ನು ದೂರ ಇಡಿ: ಚಾಮರಾಜನಗರದಲ್ಲಿ ಜನ ಸಂಜೀವಿನಿ ಎಂಬ ಸಂಸ್ಥೆಯು ಜನರಿಕ್ ಔಷಧಗಳಿಗೆ ಪರ್ಯಾಯವಾಗಿ ಮಳಿಗೆಯನ್ನು ತೆರೆದಿದೆ ಎಂಬ ವಿಷಯ ಕೇಳಿದ ಕೆ.ಆರ್.ರಮೇಶ್ ಕುಮಾರ್ ಅವರು, ಅವೆಲ್ಲ ಫ್ರಾಡ್(ವಂಚಕ) ಕಂಪನಿಗಳು. ಮೊದಲು ಆ ಸಂಸ್ಥೆಯನ್ನು ಮುಚ್ಚಿಸಿ ಎಂದು ಖಡಕ್ ಸೂಚನೆ ನೀಡಿದರು.
ಆರೋಗ್ಯ ಸಚಿವರ ಆಪ್ತ ಸಹಾಯಕ ಡಾ.ರೂಪಶ್ರೀ, ಮಂಡ್ಯ ಜಿಲ್ಲೆ ಡಿಎಚ್‍ಒ ಡಾ.ಮೋಹನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆಯುಕ್ತ ಮನೋಜ್‍ಕುಮಾರ್ ಮೀನಾ, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕ ಡಾ.ರತನ್ ಖೇಲ್‍ಕರ್, ಕರ್ನಾಟಕ ಆರೋಗ್ಯ ಅಭಿವೃದ್ಧಿ ಪುನಶ್ಚೇತನ ಯೋಜನೆಯ ಉಮಾಶಂಕರ್, ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಮುಂತಾದವರು ವೇದಿಕೆಯಲ್ಲಿ ಇದ್ದರು.