ಹಕ್ಕಿಪಿಕ್ಕಿ ಕಾಲನಿಗೆ ಮೂಲಭೂತ ಸೌಕರ್ಯ ಒದಗಿಸಲು ಒತ್ತಾಯಿಸಿ ಸಂಸದರಿಗೆ ಮನವಿ
ತುಮಕೂರು, ಅ.24: ನಗರದ ಹೊರವಲಯದಲ್ಲಿರುವ ಕೇಂದ್ರೀಯ ವಿದ್ಯಾಲಯದ ಪಕ್ಕಕ್ಕೆ ಜಾಗಕ್ಕೆ ಸ್ಥಳಾಂತರಗೊಂಡಿರುವ ಹಕ್ಕಿಪಿಕ್ಕಿ ಕಾಲನಿಯ ಜನತೆ, ನಮಗೆ ವಿದ್ಯುತ್, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರಕಾರದ ಎಂಎಸ್ ಎಂಇ ಕೌಶಲ್ಯ ತರಬೇತಿ ಕೇಂದ್ರದ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸಂಸದರಿಗೆ ಮನವಿ ಸಲ್ಲಿಸಿದ ಕಾಲನಿಯ ಮುಖಂಡರು, ನಮಗೆ ಯಾವುದೇ ಸರಕಾರಿ ಸವಲತ್ತುಗಳು ದೊರೆಯುತ್ತಿಲ್ಲ. ಸುಮಾರು 25 ವರ್ಷಗಳಿಂದ ಯಲ್ಲಾಪುರದ ಖಾಸಗಿ ಭೂಮಿಯೊಂದರಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿದ್ದೇವು. ಈಗ ಭೂಮಿಯವರು ಅಲ್ಲಿಂದ ಎತ್ತಂಗಡಿ ಮಾಡುವಂತೆ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಮಗೆ ಸದರಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ವಾಸಿಸಲು ಅವಕಾಶ ಮಾಡಿಕೊಟ್ಟಿದೆ.ಆದರೆ ಸದರಿ ಜಾಗದಲ್ಲಿ ವಿದ್ಯುತ್, ಕುಡಿಯುವ ನೀರು, ರಸ್ತೆ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯವಿಲ್ಲ. ಆದ್ದರಿಂದ ಜಿಲ್ಲಾಡಳಿತ ನಮಗೆ ಮೂಲಭೂತ ಸೌಕರ್ಯ ಕಲ್ಲಿಸಬೇಕು. ನಮಗೆ ವಿಧವಾ ವೇತನ, ವೃದ್ದಾಪ್ಯ ವೇತನ, ಅಂಗವಿಕಲರಿಗೆ ಮಾಶಾಸನ ಮಂಜೂರು ಮಾಡಿಸಿಕೊಡುವಂತೆ ಸಂಸದರಲ್ಲಿ ಮನವಿ ಮಾಡಿದರು.
ಹಕ್ಕಿಪಿಕ್ಕಿ ಕಾಲನಿಯ ಜನರ ಮನವಿಗೆ ಸ್ಪಂದಿಸಿದ ಸಂಸದರು, ಈ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರರ ಜೊತೆ ಮಾತನಾಡಿ, ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಸೂಚಿಸುವುದಾಗಿ ಭರವಸೆ ನೀಡಿದರು.