×
Ad

ಸ್ಟಾರ್ಟ್ ಗಾರ್ಮೆಂಟ್ಸ್ ಕಾರ್ಖಾನೆ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಶಿವಣ್ಣ ಒತ್ತಾಯ

Update: 2017-10-24 22:42 IST

ತುಮಕೂರು, ಅ.24: ಮಾಜಿ ಶಾಸಕ ಎಸ್.ಶಫಿ ಅಹ್ಮದ್ ಅವರ ಮಗ ಹಾಗೂ ಹಾಲಿ ಶಾಸಕ ಡಾ.ರಫೀಕ್ ಅಹ್ಮದ್ ಅವರ ಬಾಮೈದ ಅಫ್ತಾಬ್‍ ಅಹ್ಮದ್ ಮಾಲಕತ್ವದ ಸ್ಟಾರ್ಟ್ ಗಾರ್ಮೆಂಟ್ಸ್ ಕಾರ್ಖಾನೆಯ ತ್ಯಾಜ್ಯದ ನೀರು ನಗರದ ಅಮಾನಿಕೆರೆಗೆ ಸೇರುತ್ತಿದ್ದು, ಈ ನೀರು ಕಲುಷಿತಗೊಂಡು ಜನ, ಜಾನುವಾರು ಬಳಕೆಗೆ ಯೋಗ್ಯವಿಲ್ಲದಂತಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯವರು ತಕ್ಷಣ ಕ್ರಮ ಕೈಗೊಂಡು ಕಾರ್ಖಾನೆ ಮಾಲಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾರ್ಖಾನೆ ಮುಚ್ಚಿಸಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಕಾರ್ಖಾನೆ ಸ್ಥಾಪನೆಗೆ ಸಂಬಂಧಿಸಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಾವಳಿಗಳನ್ನು ಸಮರ್ಪಕವಾಗಿ ಪೂರೈಸಿಲ್ಲ. ಮಲಿನ ನೀರು ಶುದ್ಧೀಕರಣ ಮತ್ತು ಕೈಗಾರಿಕಾ ತ್ಯಾಜ್ಯ ನೀರು ಶುದ್ಧೀಕರಣಕ್ಕೆ ಅಗತ್ಯ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅ.13 ರಂದು ನಾನು ಪತ್ರ ಬರೆದಿದ್ದು, ನಂತರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಎಲ್ಲವನ್ನೂ ಸರಿಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಹಗರಣದಲ್ಲಿ ಅಪ್ಪ, ಮಗ ಹಾಲಿ ಶಾಸಕ ಯಾರೇ ಭಾಗಿಯಾಗಿದ್ದರೂ ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಬಹಿರಂಗ ಚರ್ಚೆಗೆ ಸಿದ್ಧ: ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ನೂರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಇದೆಲ್ಲವನ್ನೂ ಹಾಲಿ ಶಾಸಕರು ತಮ್ಮದೇ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದು,ಈ ಬಗ್ಗೆ ನಗರದ ಸರಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ವೇದಿಕೆ ನಿರ್ಮಿಸಿ ಬಹಿರಂಗ ಚರ್ಚೆಗೆ ಕರೆದರೆ ತಾನು ಬರಲು ಸಿದ್ಧ ಎಂದು ಸವಾಲು ಹಾಕಿದರು.

ಕಸಾಯಿಖಾನೆಗಳಿಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಬಜರಂಗ ದಳ ಕಾರ್ಯಕರ್ತರು ಬಿಡಿಸಿ ಗೋಶಾಲೆಗೆ ಕಳುಹಿಸಿದ್ದಾರೆ.ಇವರ ವಿರುದ್ಧ ಪೊಲೀಸರು ವಿವಿಧ 7 ಸೆಕ್ಷನ್‍ಗಳ ಅನ್ವಯ ಕೇಸು ದಾಖಲಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಎಸ್ಪಿಯವರು ಸಮಾಜ ಮತ್ತು ಕಾನೂನಿನ ಬಗ್ಗೆ ಗೌರವ ಇಟ್ಟುಕೊಂಡಿದ್ದರೆ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು. ಅಲ್ಲದೆ, ಮೂವರ ವಿರುದ್ಧ ಹಾಕಿರುವ ಕೇಸು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಎಸ್ಪಿಯವರೇ ಕಾರಣರಾಗುತ್ತಾರೆ ಎಂದು ಎಚ್ಚರಿಸಿದರು.

ಹಂದಿ ಮಾಂಸ ತಿಂದು ಮಸೀದಿಗೆ ಹೋಗುವ ತಾಕತ್ತಿದೆಯೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀನಿನ ಆಹಾರ ಸೇವಿಸಿ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿರುವುದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಹಂದಿ ಮಾಂಸ ತಿಂದು ಮಸೀದಿಗೆ ಹೋಗಿ ಮಾತನಾಡುವ ತಾಕತ್ತು ತೋರಿಸಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ವೆಂಕಟಪ್ಪ, ಮುಖಂಡರಾದ ಎಂ.ಬಿ.ನಂದೀಶ್, ಕೆ.ಪಿ.ಮಹೇಶ್, ಆರ್ ಟಿಐ ಕಾರ್ಯಕರ್ತ ರಾದ ರಫೀಕ್ ಪಾಷ, ಸೈಯದ್ ವಾಜೀದ್ ಅಹ್ಮದ್, ಶಾಂತರಾಜು, ನಂಜುಂಡಪ್ಪ, ಬನಶಂಕರಿಬಾಬು, ನವೀನ್‍ ಕುಮಾರ್, ಪ್ರಕಾಶ್, ಮದನ್‍ ಸಿಂಗ್, ರಾಕೇಶ್, ಅಂಬರೀಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News