ಜನನ-ಮರಣಗಳ ಕಡ್ಡಾಯ ನೋಂದಣಿಗೆ ಅಧಿಕಾರಿಗಳು ಗಮನಹರಿಸಬೇಕು: ರಮೇಶ್
ದಾವಣಗೆರೆ, ಅ.24: ಜನನ-ಮರಣ ನೋಂದಣಿ ಕಡ್ಡಾಯವಾಗಿ ಮಾಡುವುದು ಹಾಗೂ ಪ್ರತೀ ತಿಂಗಳ 10ನೆ ತಾರೀಕಿನೊಳಗೆ ಸಂಬಂಧಿಸಿದ ವರದಿ ಇಲಾಖೆಗೆ ನೀಡಲು ಸಂಬಂಧಪಟ್ಟ ಆಸ್ಪತ್ರೆಗಳು ಆಶಾ, ಎ.ಎನ್‍ಎಂ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜನನ-ಮರಣ ನಾಗರಿಕ ನೋಂದಣಿ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಆಗುವ ಹೆರಿಗೆಗಳು ಕ್ರಮವಾಗಿ ದಾಖಲಾಗುತ್ತಿವೆ. ಹಳ್ಳಿಗಳಲ್ಲಿ ಹಾಗೂ ಮಾರ್ಗ ಮಧ್ಯೆಗಳಲ್ಲಿ ಆಗುವ ಹೆರಿಗೆಗಳು ಸರಿಯಾಗಿ ದಾಖಲಾಗುತ್ತಿಲ್ಲ. ಹಾಗಾಗಿ ಎಲ್ಲರೂ ಜನನ-ಮರಣಗಳ ಕಡ್ಡಾಯ ನೋಂದಣಿ ಕಡೆ ಗಮನಹರಿಸಬೇಕೆಂದರು.
ತಾಲೂಕು ಮಟ್ಟದಲ್ಲಿ ತಹಶೀಲ್ದಾರರು ಅಧ್ಯಕ್ಷರಾಗಿರುವ ಸಮಿತಿಗೆ ಗ್ರಾಮಲೆಕ್ಕಿಗರು ಮಾಹಿತಿ ನೀಡುತ್ತಾರೆ. ನಗರ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ಮಾಹಿತಿ ಪಡೆಯಲಾಗುತ್ತದೆ. ಒಟ್ಟಾರೆ ಶೇ. 100 ರಷ್ಟು ದಾಖಲಾಗುವಂತೆ ನೋಡಿಕೊಳ್ಳಬೇಕೆಂದರು.
ಜನನ-ಮರಣ ನೋಂದಣಿ ಅಧಿನಿಯಮ 8 ಮತ್ತು 10 ರಂತೆ ಕರ್ನಾಟಕ ರಾಜ್ಯ ಸರ್ಕಾರವು ಎ.ಎನ್ ಎಂ ಗಳು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತರು ಮನೆಯಲ್ಲಿ ಸಂಭವಿಸುವ ಘಟನೆಗಳನ್ನು ಅಧಿಸೂಚಿಸಬೇಕೆಂದು ನೇಮಿಸಿದ್ದು, ಮನೆಯಲ್ಲಿ ಸಂಭವಿಸುವ ಪ್ರತಿಯೊಂದು ಜನನ-ಮರಣ ಘಟನೆಗಳ ಮಾಹಿತಿಯನ್ನು ನೋಂದಣಿದಾರರಿಗೆ ನೀಡುವುದು ಅವರ ಕರ್ತವ್ಯ ಎಂದು ಹೇಳಿದರು.
ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಜಿಲ್ಲೆಯಲ್ಲಿ ಬರುವ ಎಲ್ಲಾ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಮತ್ತು ಎಎನ್ ಎಂ ಆಶಾ ಕಾರ್ಯಕರ್ತೆಯರಿಗೆ ಜನನ-ಮರಣ ನೊಂದಣಿ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ನೂರು ಪ್ರತಿಶತ ಗುರಿ ಸಾಧಿಸಲು ನಿರ್ದೇಶನ ನೀಡಬೇಕಿದೆ. ಪ್ರತಿಯೊಂದು ಜನನ-ಮರಣಗಳ ಘಟನೆಗಳ ಮಾಹಿತಿಯನ್ನು ತಪ್ಪದೇ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದರು.
ಸಭೆಯಲ್ಲಿ ಆರೋಗ್ಯ ಇಲಾಖೆ, ಜನನ-ಮರಣ ನೊಂದಣಿ ಇಲಾಖೆ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.