ಪ್ರತ್ಯೇಕ ಅಭಿವೃದ್ಧಿ ನಿಗಮಕ್ಕೆ ಆಗ್ರಹಿಸಿ ಸವಿತಾ ಸಮಾಜದಿಂದ ಧರಣಿ
ಮಡಿಕೇರಿ, ಅ.24: ಸವಿತಾ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಜಿಲ್ಲಾ ಘಟಕ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿತು.
ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಧರಣಿ, ಮೆರವಣಿಗೆ ನಡೆಸಿದ ಪ್ರಮುಖರು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಸವಿತಾ ಸಮಾಜದ ಜಿಲ್ಲಾ ಪ್ರತಿನಿಧಿ ಪುಟ್ಟರಾಜು, ಆರ್ಥಿಕವಾಗಿ ಹಿಂದುಳಿದಿರುವ ಸವಿತಾ ಸಮಾಜಕ್ಕೆ ರಾಜ್ಯ ಸರ್ಕಾರ ಘೋಷಿಸುತ್ತಿರುವ ಅನುದಾನ ಅಲ್ಪ ಪ್ರಮಾಣದ್ದಾಗಿದ್ದು, ಸಂಕಷ್ಟದಲ್ಲಿರುವ ಸಮಾಜಕ್ಕೆ ಪ್ರತ್ಯೇಕವಾಗಿ ಅನುದಾನವನ್ನು ಮೀಸಲಿಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಅಭಿವೃದ್ಧಿ ನಿಗಮದ ಸ್ಥಾಪನೆಯಾಗಬೇಕೆಂದು ಒತ್ತಾಯಿಸಿದರು.
ಮಡಿಕೇರಿ ತಾಲೂಕು ಅಧ್ಯಕ್ಷ ಎಂ.ಟಿ.ಮಧು ಮಾತನಾಡಿ, ಸವಿತಾ ಸಮಾಜವು 2(ಎ) ಮೀಸಲಾತಿಯಡಿ ಬರುತ್ತಿದ್ದು, ಈ ವಿಭಾಗದಲ್ಲಿ 108 ಉಪ ಜಾತಿಗಳು ಸೇರ್ಪಡೆಗೊಳ್ಳುವುದರಿಂದ ಸವಿತಾ ಸಮಾಜಕ್ಕೆ ಸಿಗಬೇಕಾದ ನ್ಯಾಯಯುತ ಸೌಲಭ್ಯ ದೊರೆಯುತ್ತಿಲ್ಲವೆಂದರು.
ಧರಣಿಯಲ್ಲಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ವೆಂಕಟೇಶ್, ವೀರಾಜಪೇಟೆ ಅಧ್ಯಕ್ಷ ಬಿ.ಎಸ್.ದಿನೇಶ್, ಮಡಿಕೇರಿ ಕಾರ್ಯದರ್ಶಿ ಅವಿನಾಶ್ ಹಾಗೂ ತಾಲ್ಲೂಕು ಪ್ರತಿನಿಧಿ ಎಂ.ಜಿ.ಚರಣ್, ಶಿವಣ್ಣ, ರಾಮಣ್ಣ, ತಮ್ಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.