ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ಅಧಿಕಾರಿಗಳ ದಾಳಿ: 25 ಮಂದಿ ಮೇಲೆ ದೂರು ದಾಖಲು
ಶಿವಮೊಗ್ಗ, ಅ.24: ಇತ್ತೀಚೆಗೆ ಶಿವಮೊಗ್ಗ ತಾಲೂಕಿನ ವಿವಿಧೆಡೆ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಳಗಳ ಮೇಲೆ ಗಣಿ ಮತ್ತು ಭೂ ವಿಜ್ಞ್ಞಾನ ಇಲಾಖೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ದೂರು ದಾಖಲಿಸಿದ ಘಟನೆ ವರದಿಯಾಗಿದೆ.
ಅನಧೀಕೃತ ಕಲ್ಲು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದ ಭೂ ಮಾಲಕರು, ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಾಹನಗಳ ಮಾಲಕರು ಸೇರಿದಂತೆ ಒಟ್ಟಾರೆ 25 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಲಕ್ಷಾಂತರ ರೂ. ವೌಲ್ಯದ 17 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಗಣಿ ಮತ್ತೂ ಭೂ ವಿಜ್ಞ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳಾದ ಸಿ.ಆರ್.ರಶ್ಮಿ, ವಿಂದ್ಯಾ ನೇತೃತ್ವದ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ದಾಳಿಯ ವಿವರ: ಅಬ್ಬಲಗೆರೆ ಹಾಗೂ ಕಲ್ಲುಗಂಗೂರು ಗ್ರಾಮದಲ್ಲಿ ಅನುಮತಿಯಿಲ್ಲದೆ ಸರಕಾರಿ ಮತ್ತು ಖಾಸಗಿ ಜಾಗದಲ್ಲಿ ಕೆಲವರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ಅಬ್ಬಲಗೆರೆ ಗ್ರಾಮದ ಸರ್ವೇ ನಂಬರ್ 115, ಹುಣಸೋಡು ಗ್ರಾಮದ ಸರ್ವೇ ನಂಬರ್ 18/1, 18/3 ಹಾಗೂ 21 ರಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿತ್ತು.
ಈ ಸ್ಥಳದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಆರೋಪಿಗಳೆಲ್ಲರೂ ಪರಾರಿಯಾಗಿದ್ದಾರೆ. ಒಟ್ಟಾರೆ 16 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿದ್ದ 3 ಕಂಪ್ರೆಸ್ಸರ್, 2 ಲಾರಿ, 3 ಹಿತಾಚಿ, 5 ಟ್ರಾಕ್ಟರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ತಾಲೂಕಿನ ಗೆಜ್ಜೇನಹಳ್ಳಿ ಗ್ರಾಮದ ಸ. ನಂ. 77/4, 77/5ಬಿ ಹಾಗೂ ದೇವಕಾತಿಕೊಪ್ಪದ ಸ. ನಂ. 79ರಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ಸ್ಥಳದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ವೇಳೆ 9 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಥಳದಲ್ಲಿದ್ದ 1 ಲಾರಿ ಹಾಗೂ 5 ಹಿತಾಚಿಗಳನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದೆ.