ಆಧಾರ್ ಜೋಡಣೆಗೆ ಮಾರ್ಚ್ 31ರವರೆಗೆ ಅವಕಾಶ: ಕೇಂದ್ರ ಸರಕಾರ

Update: 2017-10-25 12:34 GMT

ಹೊಸದಿಲ್ಲಿ, ಅ.25: ವಿವಿಧ ಸರಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವ ಅಂತಿಮ ದಿನಾಂಕವನ್ನು 2018ರ ಮಾರ್ಚ್ 31ರವರೆಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

  ಈ ಹಿಂದೆ ಡಿಸೆಂಬರ್‌ವರೆಗೆ ಸಮಯಾವಕಾಶ ನೀಡಲಾಗಿತ್ತು. ಆದರೆ ಇದೀಗ ಈ ದಿನಾಂಕವನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗುವುದು ಎಂದು ಅಟಾರ್ನಿ ಜನರಲ್ ಕೆ.ಕೆ..ವೇಣುಗೋಪಾಲ್ ನ್ಯಾಯಪೀಠಕ್ಕೆ ತಿಳಿಸಿದರು. ಪ್ರಸ್ತುತ ಆಧಾರ್ ಸಂಖ್ಯೆ ಹೊಂದಿರದ ವ್ಯಕ್ತಿಗಳೂ ಸರಕಾರದ ಯೋಜನೆಗಳ ಸೌಲಭ್ಯ ಪಡೆಯಬಹುದು . ಆದರೆ ಮಾರ್ಚ್ 31ರ ಒಳಗೆ ಅವರು ಆಧಾರ್ ಕಾರ್ಡ್ ಮಾಡಿಸಬೇಕು ಎಂದವರು ತಿಳಿಸಿದರು.

 ಸರಕಾರಿ ಸೌಲಭ್ಯ ಪಡೆಯಬೇಕಿದ್ದರೆ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ನಂಬರ್‌ಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಿರುವ ಸರಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ನ್ಯಾಯಪೀಠ ನಡೆಸಿತು. ಈ ಸಂದರ್ಭ ಅರ್ಜಿದಾರರ ಪರ ವಕೀಲ ಶ್ಯಾಮ್ ದಿವಾನ್ ಆಧಾರ್ ಕುರಿತು ಸಲ್ಲಿಸಲಾಗಿರುವ ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೊಳಿಸುವಂತೆ ಮನವಿ ಮಾಡಿದರು. ಸರಕಾರ ಅಂತಿಮ ದಿನಾಂಕವನ್ನು 2018ರ ಮಾರ್ಚ್ 31ರವರೆಗೆ ಮುಂದೂಡಿದ್ದರೂ , ಬ್ಯಾಂಕ್ ಖಾತೆಗೆ ಅಥವಾ ಮೊಬೈಲ್ ನಂಬರ್‌ಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಬಯಸದ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸರಕಾರ ಎಲ್ಲೂ ಹೇಳಿಕೆ ನೀಡಿಲ್ಲ ಎಂಬುದನ್ನು ಅವರು ನ್ಯಾಯಪೀಠದ ಗಮನಕ್ಕೆ ತಂದರು. ಕೆಲವು ವಿಷಯಗಳ ಕುರಿತು ಸೂಚನೆಗಳನ್ನು ಪಡೆಯಲು ತಾನು ಬಯಸಿರುವುದಾಗಿ ಅಟಾರ್ನಿ ಜನರಲ್ ತಿಳಿಸಿದಾಗ, ಸೋಮವಾರ ನಡೆಯಲಿರುವ ವಿಚಾರಣೆ ವೇಳೆ ಈ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರಕಾರಕ್ಕೆ ನ್ಯಾಯಪೀಠ ತಿಳಿಸಿತು.

 35 ಸಚಿವಾಲಯಕ್ಕೆ ಸಂಬಂಧಿಸಿದ ಸುಮಾರು 135 ಸಮಾಜಕಲ್ಯಾಣ ಯೋಜನೆಯ ಪ್ರಯೋಜನ ಪಡೆಯಬೇಕಿದ್ದರೆ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ನಂಬರ್‌ಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಲಾಗಿದೆ. ಉಚಿತ ಅಡುಗೆ ಅನಿಲ, ಸೀಮೆಎಣ್ಣೆ ಮತ್ತು ರಸಗೊಬ್ಬರ ಸಬ್ಸಿಡಿ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳು ಇದರಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News