ಮೈಸೂರು: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಧರಣಿ
ಮೈಸೂರು, ಅ.25: ಬೆಳಗಾವಿ ಅಧಿವೇಶನದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯಾದ್ಯಂತ ಜನಾಂದೋಲನಾ ರ್ಯಾಲಿ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಮಾವೇಶಗೊಂಡ ಸಮಿತಿಯ ಕಾರ್ಯಕರ್ತರು ಬೇಡಿಕೆ ಈಡೇರಿಕೆಗಾಗಿ ಧರಣಿ ನಡೆಸಿದರು.
ಈ ವೇಳೆ ಧರಣಿ ನಿರತರರು ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಿ ಸಂವಿಧಾನ ತಿದ್ದುಪಡಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಹಿಂದುಳಿದ ವರ್ಗಗಳ ಅಧ್ಯಕ್ಷ ಕಾಂತರಾಜ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಿ ಎಲ್ಲಾ ಜಾತಿಗಳಿಗೆ ಆಯಾ ಜಾತಿಯ ಜನಸಂಖ್ಯೆ ಆಧರಿಸಿ ಜಾತಿವಾರು ಮೀಸಲಾತಿ ಕಲ್ಪಿಸಲಿ. ಪರಿಶಿಷ್ಟ ರಾಜ್ಯ ಸರ್ಕಾರಿ ನೌಕರರ ಭಡ್ತಿ ಮೀಸಲಾತಿ ವಿರುದ್ಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ 15 ಸಾವಿರ ಪರಿಶಿಷ್ಟ ನೌಕರರು ಹಿಂಭಡ್ತಿ ಹೊಂದುವ ಆತಂಕದಲ್ಲಿದ್ದಾರೆ. ಪರಿಶಿಷ್ಟ ನೌಕರರ ಬಡ್ತಿ ಮುಂದುವರೆಸಲು ಸರ್ಕಾರ ತಂದಿರುವ ನೂತನ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಿ ಸುಗ್ರೀವಾಜ್ಞೆ ಜಾರಿ ಮಾಡಲಿ ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಭೂರಹಿತ ಬಗರ್ ಹುಕ್ಕುಂ ಸಾಗುವಳಿಯನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಲಿ, ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ 70ಕ್ಕೆ ಹೆಚ್ಚಿಸಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಆಧರಿಸಿ ಮೀಸಲಾತಿಯನ್ನು ಶೇ.18 ರಿಂದ 25ಕ್ಕೆ ಹೆಚ್ಚಿಸಲಿ. ರಾಜ್ಯಾದ್ಯಂತ ಸರ್ಕಾರದಲ್ಲಿ ದಿನಗೂಲಿ ನೌಕರರಾಗಿ ದುಡಿಯುತ್ತಿರುವ ಪೌರಕಾರ್ಮಿಕರು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಹಾಸ್ಟೆಲ್ ಮತ್ತು ಬಿಸಿಯೂಟ ಅಡಿಗೆ ತಯಾರಕರು ಹಾಗೂ ದಿನಗೂಲಿಗಳು ಹಾಗೂ ಗ್ರಾಮ, ತಾಲೂಕು ಜಿಲ್ಲಾ ಪಂಚಾಯಿತಿ ದಿನಗೂಲಿ ನೌಕರರನ್ನು ಖಾಯಂ ಮಾಡಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಜೆ.ಮಹದೇವ ಸೌರಭ ಸಿದ್ದರಾಜು, ಜಾಕೀರ್ ಹುಸೇನ್, ಶಿವಣ್ಣ, ಚೆಲುವರಾಜು, ಶಿವಶಂಕರ, ಟಿ.ಎ.ಸಣ್ಣಸ್ವಾಮಿ ಇತರರು ಪಾಲ್ಗೊಂಡಿದ್ದರು.