ಚಿಕ್ಕಮಗಳೂರು: ಭೂಮಿ ಕಾಯ್ದಿರಿಸಲು ಒತ್ತಾಯಿಸಿ ಧರಣಿ
ಚಿಕ್ಕಮಗಳೂರು, ಅ.25: ನಿವೇಶನ ರಹಿತರಿಗೆ ಭೂಮಿಯನ್ನು ಕಾಯ್ದಿರಿಸಬೇಕು ಎಂದು ಒತ್ತಾಯಿಸಿ ಜೋಳ್ದಾಳ್ ಗ್ರಾಮಸ್ಥರು ಪ್ರಗತಿಪರ ರೈತ ಸಂಘದ ಜಿಲ್ಲಾ ಸಮಿತಿ ಕಾರ್ಯಕರ್ತರೊಂದಿಗೆ ಕಾಲ್ನಡಿಗೆ ಮೂಲಕ ತೆರಳಿ ಆಝಾದ್‌ಪಾರ್ಕ್‌ನಲ್ಲಿ ಧರಣಿ ನಡೆಸಿ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ವಸ್ತಾರೆ ಹೋಬಳಿಯ ಜೋಳ್ದಾಳ್ ಗ್ರಾಮದ ಸ.ನಂ. 202ರಲ್ಲಿ 58 ಎಕರೆ ಸರಕಾರಿ ಜಮೀನಿನಲ್ಲಿ 28 ಎಕರೆ ಪ್ರದೇಶವನ್ನು ತಾಲೂಕು ಆಡಳಿತ 2015ರಲ್ಲಿ ತೆರವುಗೊಳಿಸಿ ಗಡಿ ಗುರುತಿಸಿದೆ. ಈ ತೆರವುಗೊಳಿಸಿದ ಜಾಗದಲ್ಲಿ ಸ್ಥಳೀಯ ನಿವೇಶನ ರಹಿತರಿಗೆ 10 ಎಕರೆ ಭೂಮಿಯನ್ನು ಕಾಯ್ದಿರಿಸುವಂತೆ ಜೋಳ್ದಾಳ್ ಗ್ರಾಮಸ್ಥರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಹಿಂದಿನ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ಗೆ ಈ ಕುರಿತು ಮನವಿ ಸಲ್ಲಿಸಿದ್ದರಿಂದ ಸರ್ವೇ ನಡೆಸಿ, ನಿವೇಶನಕ್ಕೆ ಜಾಗ ಕಾಯ್ದಿರಿಸಲು ರಾಜಸ್ವ ನಿರೀಕ್ಷಕರಿಗೆ ಮತ್ತು ಗ್ರಾಮ ಲಕ್ಕಿಗರಿಗೆ ಆದೇಶಿಸಿದ್ದರು. ಆದರೆ, ಈ ಅಧಿಕಾರಿಗಳು ಮೇಲಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಅಳತೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ.
ಸಾಮಾನ್ಯ ಜನರ ಸಮಸ್ಯೆ ಪರಿಹರಿಸುವಲ್ಲಿ ಈ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ಈ ಸ.ನ. 202ರ ತೆರವುಗೊಳಿಸಿದ ಜಾಗದಲ್ಲಿ 4 ಜನ ನಕಲಿ ಅರ್ಜಿದಾರರನ್ನು ಸೃಷ್ಟಿಸಿ ಫಾರಂ ನಂ.53ರಲ್ಲಿ ತಲಾ 4 ಎಕರೆ ಮಂಜೂರು ಮಾಡಿ ಭೂಮಾಲಕರಿಗೆ ಭೂಮಿ ಉಳಿಸಿ ಕೊಡುವ ತಂತ್ರಗಾರಿಕೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮಸ್ಥರು, ಸಂಘಟನೆಗಳು ಪುನಃ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ದೂರು ನೀಡಿದ್ದರು. ತಹಶೀಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರನ್ನು ಕರೆಸಿ ಫಾರಂ ನಂ.53ರಲ್ಲಿ ಮಂಜೂರು ಮಾಡದಂತೆ ಖಡಕ್ ಎಚ್ಚರಿಕೆ ನೀಡಿದ್ದರು ಎಂದಿದ್ದಾರೆ. ಈ ಭೂಮಿಯನ್ನು ಗ್ರಾಮದ ನಿವೇಶನ ರಹಿತರ ಅನುಕೂಲಕ್ಕೆ ಗಡಿ ಗುರುತಿಸಲು, ನಿಯಮಾನುಸಾರ ಪರಿಶೀಲಿಸಿ ಕ್ರಮ ವಹಿಸಲು ಪತ್ರ ನೀಡಿದ್ದರು. ಆದರೆ, ಹಿಂದಿನ ಜಿಲ್ಲ್ಲಾಧಿಕಾರಿ ವರ್ಗಾವಣೆ ನಂತರ ಈ ವಿಷಯದ ಬಗ್ಗೆ ಯಾವುದೇ ಕ್ರಮ ವಹಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ದರಿಂದ ಕೂಡಲೇ ಕ್ರಮ ವಹಿಸಿ ನಿವೇಶನ ಕಾಯ್ದಿರಿಸಲು ಸಂಬಂಧಿಸಿದವರಿಗೆ ಸೂಚನೆ ನೀಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಎಸ್. ಉದ್ದಪ್ಪ, ಕಾರ್ಯದರ್ಶಿ ಪ್ರೇಂ ಕುಮಾರ್, ಉಪಾಧ್ಯಕ್ಷ ಹಾಲಪ್ಪ, ಗ್ರಾಮಸ್ಥರಾದ ಜೆ.ಡಿ. ಪರಮೇಶ್, ರಘು, ಕುಮಾರ್, ರುದ್ರೇಶ್, ವಸಂತ್, ಗಂಗಯ್ಯ ಮತ್ತಿತರಿದ್ದರು.