ಕೊಡವರನ್ನು ದಡ್ಡರನ್ನಾಗಿ ಮಾಡಲಾಗುತ್ತಿದೆ: ವಿಠಲ್ ನಂಜಪ್ಪ
ಮಡಿಕೇರಿ, ಅ.25: ಕೊಡವರು ತಾವು ಸಾಕುವ ನಾಯಿಗಳಿಗೆ ಟಿಪ್ಪುವಿನ ಹೆಸರನ್ನು ಇಡುತ್ತಾರೆ ಎಂದು ಕಲಾವಿದ ಅಡ್ಡಂಡ ಸಿ.ಕಾರ್ಯಪ್ಪ ಅವರು ನೀಡಿರುವ ಹೇಳಿಕೆ ಖಂಡನೀಯ ಎಂದು ತಿಳಿಸಿರುವ ಅಲ್ಲಾರಂಡ ರಂಗ ಚಾವಡಿಯ ಸಂಚಾಲಕ ಅಲ್ಲಾರಂಡ ವಿಠಲ್ ನಂಜಪ್ಪ, ಕೊಡವರ ಮೇಲೆ ದೌರ್ಜನ್ಯ ನಡೆಸಿದ ಇತರ ರಾಜರ ಹೆಸರನ್ನು ನಾಯಿಗಳಿಗೆ ಯಾಕೆ ಇಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಡ್ಡಂಡ ಕಾರ್ಯಪ್ಪ ಕೊಡವರ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಶಿಕ್ಷಣ ಇರುವ ಯಾವುದೇ ಕೊಡವರು ಕೆಟ್ಟ ಮಾತುಗಳನ್ನಾಡುವುದಿಲ್ಲ. ಕಲಾವಿದರು ಪರಸ್ಪರ ಪ್ರೀತಿಸುವ ಸಂದೇಶ ನೀಡಬೇಕೆ ಹೊರತು ದ್ವೇಷಿಸುವ ಹೇಳಿಕೆಗಳನ್ನು ನೀಡಬಾರದು. ಒಬ್ಬ ಕಲಾವಿದರಾಗಿ ಕಾರ್ಯಪ್ಪ ಅವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಕೊಡವರ ಸ್ವಾಭಿಮಾನಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕೊಡವರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ದಡ್ಡರನ್ನಾಗಿ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೆ ಕೊಡವರ ಮೌನವೇ ಕಾರಣವೆಂದು ವಿಠಲ್ ನಂಜಪ್ಪ ಟೀಕಿಸಿದರು. ಕೊಡವರು ನಾಯಿಗಳಿಗೆ ಟಿಪ್ಪುವಿನ ಹೆಸರನ್ನು ಇಡುತ್ತಾರೆ ಎಂದು ಕಾರ್ಯಪ್ಪ ಅವರು ನೀಡಿರುವ ಹೇಳಿಕೆಯಿಂದ ಮುಗ್ಧ ಹಾಗೂ ಪ್ರಗತಿಪರ ಚಿಂತನೆ ಉಳ್ಳ ಎಲ್ಲಾ ಕೊಡವ ಮನಸ್ಸುಗಳಿಗೆ ನೋವಾಗಿದೆ. ಟಿಪ್ಪುವಿನಿಂದ ಜಮೀನು ಪಡೆದು ಬದುಕು ಕಟ್ಟಿಕೊಂಡಿರುವ ನಂಜನಗೂಡು ಪ್ರಾಂತ್ಯದ ಹಿಂದೂಗಳು ಕೊಡವರನ್ನು ಬೇರೆಯದೇ ದೃಷ್ಟಿಕೋನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇರಳದ ದಲಿತ ಹೆಣ್ಣು ಮಕ್ಕಳು ಕಷ್ಟದಲ್ಲಿದ್ದಾಗ ಟಿಪ್ಪುಸಾಕಷ್ಟು ಬಟ್ಟೆಗಳನ್ನು ಒದಗಿಸಿ ಔದಾರ್ಯ ಮೆರೆದಿದ್ದಾರೆ. ಟಿಪ್ಪುವಿನಿಂದ ಲಾಭ ಪಡೆದ ಕೇರಳಿಗರ ಮನಸ್ಸಿಗೂ ಕೊಡವರ ಬಗ್ಗೆ ತಿರಸ್ಕಾರ ಭಾವನೆ ಮೂಡುವಂತ್ತಾಗಿದ್ದು, ಕೊಡವರಿಗೆ ಅಪಮಾನವಾಗಿದೆ ಎಂದು ವಿಠಲ್ ನಂಜಪ್ಪ ಆರೋಪಿಸಿದರು.
ಮೇಲುಕೋಟೆ, ಶಿವಮೊಗ್ಗದ ಶೃಂಗೇರಿ ದೇವಾಲಯ ಸೇರಿದಂತೆ 346ಕ್ಕೂ ಅಧಿಕ ದೇವಾಲಯಗಳ ಅಭಿವೃದ್ಧಿಗೆ ಟಿಪ್ಪು ಕೊಡುಗೆಯನ್ನು ನೀಡಿದ್ದು, ಕಾರ್ಯಪ್ಪಹೇಳಿಕೆಯಿಂದ ಭಕ್ತರ ಮನಸ್ಸಿಗೆ ನೋವಾಗಿದೆ. ಕೊಡಗಿನಲ್ಲಿರುವ ಟಿಪ್ಪುಹೆಸರಿನ ವ್ಯಕ್ತಿಗಳ ಮನಸ್ಸಿಗೂ ನೋವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.