×
Ad

ಗಿರಿಜನರಲ್ಲಿ ಶಿಶು ಮರಣದ ಜಾಗೃತಿ ಮೂಡಿಸಿ: ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ

Update: 2017-10-25 22:52 IST

ಮಡಿಕೇರಿ, ಅ.25: ಆರೋಗ್ಯ ವ್ಯವಸ್ಥೆಯಲ್ಲಿ ಎಲ್ಲಾ ರೀತಿಯ ಸುಧಾರಣೆಯಾಗಿದ್ದರೂ ಶಿಶು ಮರಣ ಪ್ರಕರಣಗಳು ಕಡಿಮೆಯಾಗದಿರುವುದು ಬೇಸರದ ವಿಷಯ. ಗಿರಿಜನರಲ್ಲಿ ಹೆಚ್ಚು ಶಿಶು ಮರಣ ಪ್ರಕರಣಗಳು ಕಂಡು ಬರುತ್ತಿದ್ದು, ಗಿರಿಜನರು ಇರುವ ಕಡೆ ಪ್ರತಿ ತಿಂಗಳು ಶಿಬಿರ ಏರ್ಪಡಿಸಿ ಜಾಗೃತಿ ಮೂಡಿಸಿ ಶಿಶು ಮರಣವನ್ನು ತಡೆಯುವಲ್ಲಿ ಶ್ರಮಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಎಸ್.ಎನ್.ಸಿ.ಯು ಪ್ರಗತಿ ಪರಿಶೀಲನೆ ಮಾಹಿತಿ ಪಡೆದು ಅವರು ಮಾತನಾಡಿದರು.

ಗಿರಿಜನರ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ಕೊರತೆ ಇದೆ. ಐ.ಯು.ಸಿ. ಮುಖಾಂತರ ಶಿಶು ಆರೈಕೆ ಬಗ್ಗೆ ಗಿರಿಜನರಲ್ಲಿ ಹೆಚ್ಚು ಪ್ರಚಾರ ಮಾಡಿ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಕ್ರಮವಹಿಸಲಾಗುವುದು ಎಂದು ಜಿಲ್ಲಾ ಮಟ್ಟದ ಕಾರ್ಯಕ್ರಮಗಳ ಅಧಿಕಾರಿ ಡಾ.ನಿಲೇಶ್ ಜಿಲ್ಲಾಧಿಕಾರಿಯವರ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಗಿರಿಜನರು ಹೆಚ್ಚಿರುವ ವಿರಾಜಪೇಟೆಯಲ್ಲಿ ತಾಯಿ ಮಗುವಿನ ಆರೈಕೆಗೆ ವಿರಾಜಪೇಟೆ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಶಿಶು ಮರಣ ತಪ್ಪಿಸುವಂತೆ ಸೂಚನೆ ನೀಡಿದರು. ಲಸಿಕಾ ಅಭಿಯಾನ ಪ್ರಗತಿ ಹಾಗೂ ಜಿಲ್ಲಾ ಆರೋಗ್ಯ ಸಂಘ ರಾಷ್ಟ್ರೀಯ ಆರೋಗ್ಯ ಅಭಿಯಾನ ಸೆಪ್ಟೆಂಬರ್ 2017ರ ಮಾಸಿಕ ವರದಿ ಮಾಹಿತಿ ನೀಡಿದ ಡಾ.ನೀಲೇಶ್, ಜಿಲ್ಲೆಯಲ್ಲಿನ ಶಾಲೆಯಲ್ಲಿ ಲಸಿಕಾ ಅಭಿಯಾನವು ಶೇ.40 ರಷ್ಟು ಪೂರ್ಣಗೊಂಡಿದ್ದು, ವರ್ಷಾಂತ್ಯಕ್ಕೆ ಪೂರ್ಣಗೊಳಿಸುವುದಾಗಿ ತಿಳಿಸಿದರು. ಇತರ ಲಸಿಕಾ ಕಾರ್ಯಕ್ರಮಗಳಲ್ಲಿ ಶೇ.95 ರಷ್ಟು ಪ್ರಗತಿ ಸಾಧಿಸಿದ್ದು, ರಾಜ್ಯದಲ್ಲೇ ಜಿಲ್ಲೆ 4ನೆ ಸ್ಥಾನದಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸುವರ್ಣ ಆರೋಗ್ಯ ಯೋಜನೆ ಮತ್ತು ಯಶಸ್ವಿನಿ ಯೋಜನೆಗಳ ಪ್ರಗತಿ ಪರಿಶೀಲನೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಯೋಜನೆಯಲ್ಲಿನ ತಾಂತ್ರಿಕ ದೋಷವನ್ನು ಸರಿಪಡಿಸಿ ಆಸ್ಪತ್ರೆಗಳಿಗೆ ಬಾಕಿ ಇರುವ ಪಾವತಿಯನ್ನು ಶೀಘ್ರದಲ್ಲಿ ಪಾವತಿಸಬೇಕೆಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಶಿವಕುಮಾರ್, ಡಾ.ನೀಲೇಶ್, ಡಾ.ಎನ್. ಆನಂದ್ ಹಾಗೂ ಜಿಲ್ಲೆಯ ಮೂವರು ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News