×
Ad

ಕಾವೇರಿ ತಾಲೂಕು ರಚನೆಗೆ ಒತ್ತಾಯ: ರಸ್ತೆ ತಡೆ, ಪ್ರತಿಭಟನೆ

Update: 2017-10-25 23:07 IST

ಸುಂಟಿಕೊಪ್ಪ, ಅ.25: ಕಾವೇರಿ ತಾಲೂಕು ರಚನೆಯ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾವೇರಿ ತಾಲೂಕು ರಚನಾ ಹೋರಾಟ ಸ್ಥಾನೀಯ ಸಮಿತಿ ಕಂಬಿಬಾಣೆ, ಕೊಡಗರ ಹಳ್ಳಿ ಸ್ಥಾನೀಯ ಸಮಿತಿ ವತಿಯಿಂದ ಬುಧವಾರ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ, ಅಂಚೆ ಕಾರ್ಡು ಚಳವಳಿ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆಯುವ ಮೂಲಕ ತೀವ್ರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಇಲ್ಲಿನ ಯಾವುದೇ ಕೆಲಸ ಕಾರ್ಯಕ್ಕೆ ತೆರಳಬೇಕಾದರೂ ನೂರಾರು ರೂ.ಗಳನ್ನು ವ್ಯಯಿಸಿ 80 ಕಿ.ಮೀ ದೂರದಲ್ಲಿರುವ ತಾಲೂಕು ಕೇಂದ್ರಕ್ಕೆ ಹೋಗಬೇಕಾಗಿದೆ. ಸರಕಾರದ ನಿಯಮದಂತೆ ಜನಸಂಖ್ಯೆಯೇ ಹೊಂದಿರದ ಪಟ್ಟಣಗಳನು ತಾಲೂಕು ಕೇಂದ್ರವೆಂದು ಘೋಷಿಸಲು ಹೊರಟಿದ್ದಾರೆ. ಆದರೆ ಸಕಾಲ ಸವಲತ್ತುಗಳನ್ನು ಹೊಂದಿದ್ದು, ಸೂಕ್ತ ಜನ ಸಂಖ್ಯೆಯ ಆಧಾರದಲ್ಲಿ ಕಾವೇರಿ ತಾಲೂಕಾಗಿ ಘೋಷಿಸಲು ಸರಕಾರ ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿದರು.

ಸರಕಾರದ ವಿರುದ್ಧ ಕಾವೇರಿ ಹೋರಾಟವು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಮತ್ತೊಂದು ಹಂತವಾಗಿ ಅ.30ರಂದು ಕುಶಾಲನಗರದಲ್ಲಿ ಚಳುವಳಿ ನಡೆಸಲಾಗುತ್ತದೆ. ಇದು ಜನರ ಹೋರಾಟವಾಗಿದ್ದು, ಮನೆಮನೆಯ ಹೋರಾಟವಾಗಿದೆ ಎಂದರು.

ಜನರ ಕೂಗನ್ನು ಸರಕಾರವು ಅರ್ಥ ಮಾಡಿಕೊಂಡು ಜನರ ಬೇಡಿಕೆಯ ತೀವ್ರತೆಯನ್ನು ಅರಿತು ಎಲ್ಲ ರೀತಿಯಲ್ಲಿ ತಾಲೂಕಿಗೆ ಬೇಕಾದ ಅರ್ಹತೆ ಹೊಂದಿರುವ ಕುಶಾಲನಗರವನ್ನು ತಾಲೂಕಾಗಿ ಸರ್ಕಾರ ಘೋಷಣೆ ಮಾಡಬೇಕು. ಸರಕಾರ ಘೋಷಣೆ ಮಾಡಿರುವ 50 ತಾಲೂಕು ಕೇಂದ್ರಗಳಲ್ಲಿ ಹಲವು ತಾಲೂಕುಗಳಲ್ಲಿ ಕುಶಾಲನಗರದಲ್ಲಿರುವ ಸೌಕರ್ಯಗಳ ಅರ್ಧದಷ್ಟು ಕೂಡ ಇಲ್ಲ. ಅದೆಲ್ಲಾ ರಾಜಕೀಯ ಪ್ರಭಾವಕ್ಕೆ ಒಳಗಾದ ತಾಲೂಕು ಕೇಂದ್ರಗಳಾಗಿ ಪರಿವರ್ತನೆಗೊಂಡಿದ್ದು, ಕುಶಾಲನಗರವನ್ನು ನಿರ್ಲಕ್ಷಿಸಲಾಗಿದೆ ಎಂದರು.

ಕಂಬಿಬಾಣೆ ಗ್ರಾ.ಪಂ. ಮಾಜಿ ಅಧ್ಯಕ್ಷ ಡಾ.ಶಶಿಕಾಂತ್ ರೈ ಮಾತನಾಡಿ, ರಾಜ್ಯದಲ್ಲಿ 49 ತಾಲೂಕು ಕೇಂದ್ರಗಳನ್ನು ಸರಕಾರ ಘೋಷಿಸಿದ್ದು, ಹೊಸದಾಗಿ ದಾಂಡೇಲಿಯಂತಹ ಸಣ್ಣ ಊರನ್ನು ಪರಿಗಣಿಸಲಾಗಿದೆ ಎಂದರು.

ಕುಶಾಲನಗರದಲ್ಲಿ ಅ.30 ರಂದು ನಡೆಯಲಿರುವ ಜನಾಂದೋಲನಕ್ಕೆ ಈ ಭಾಗದ ಎಲ್ಲ ಸಾರ್ವಜನಿಕರು ಭಾಗವಹಿಸಬೇಕು ಎಂದು ಡಾ.ಶಶಿಕಾಂತ್ ಕರೆ ನೀಡಿದರು.

ಈ ಸಂದರ್ಭದಲ್ಲಿ ಕೊಡಗರ ಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕ್ಲೈವಾ ಪೊನ್ನಪ್ಪ ಮಾತನಾಡಿದರು. ಪ್ರತಿಭಟನೆಯಲ್ಲಿ ಕಂಬಿಬಾಣೆ ಗ್ರಾ.ಪಂ. ಅಧ್ಯಕ್ಷ ಕೃಷ್ಣ, ಕಂಬಿ ಬಾಣೆ ಸದಸ್ಯ ಆನಂದ, ಕೊಡಗರಹಳ್ಳಿ ಗ್ರಾ.ಪಂ.ಅಧ್ಯಕ್ಷ ಎಚ್. ಇ. ಅಬ್ಬಾಸ್, ಉಪಾಧ್ಯಕ್ಷೆ ಪ್ರೇಮಾ, ಸದಸ್ಯರಾದ ಎನ್.ಡಿ. ನಂಜಪ್ಪ, ಉಸ್ಮಾನ್, ಏಳನೆ ಹೊಸಕೋಟೆ ಗ್ರಾ.ಪಂ. ಉಪಾಧ್ಯಕ್ಷ ಮುಸ್ತಾಫ, ಮಾಜಿ ಅಧ್ಯಕ್ಷ ಭಾಗೇಶ್, ಎನ್‌ವೈಸಿ ಸಂಘದ ಜಗದೀಶ್, ದತ್ತ ಸೋಮಣ್ಣ, ಶಾಂತಿ ನಿಕೇತನ ಶಾಲೆಯ ಮುಖ್ಯ ಶಿಕ್ಷಕಿ ಫಾತಿಮಾ, ಕೆ.ಎಸ್. ಮಂಜುನಾಥ್, ದೇವಾಲಯ ಸಮಿತಿ ಅಧ್ಯಕ್ಷ ಜಯಂತ್ ಕುಮಾರ್, ನಿವೃತ್ತ ಪ್ರಾಧ್ಯಾಪಕ ಎಂ.ಪಿ. ಸುಬ್ಬಯ್ಯ, ಎಸ್‌ಎನ್‌ಎಚ್ ಶಾಲೆಯ ಕುಟ್ಟಪ್ಪ, ನಾಣ್ಣಯ್ಯ, 7 ನೆ ಹೊಸಕೋಟೆ ಅವಲಕುಟ್ಟಿ, ಶಾಲಾ ಮಕ್ಕಳು, ಸಾರ್ವಜನಿಕರು ನರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News