×
Ad

ರಾಜ್ಯ ಸರಕಾರದಿಂದ ಹಣ ದುರುಪಯೋಗ: ಶೋಭಾ ಕರಂದ್ಲಾಜೆ ಆರೋಪ

Update: 2017-10-25 23:12 IST

ಮಡಿಕೇರಿ, ಅ.25: ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತದಿಂದ ರಾಜ್ಯ ಅಭಿವೃದ್ಧಿ ಶೂನ್ಯವಾಗಿದ್ದು, ಅಭಿವೃದ್ಧಿಗೆ ಮೀಸಲಾದ ಹಣದ ದುರುಪಯೋಗವಾಗುತ್ತಿದೆ. ತಮ್ಮ ಈ ಎಲ್ಲಾ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಪ್ರಯತ್ನವಾಗಿ ಕಾಂಗ್ರೆಸ್ ಸರ್ಕಾರ ಇದೀಗ ಅನಗತ್ಯವಾಗಿ ಬಿಜೆಪಿ ವಿರುದ್ಧ ಟೀಕೆ ಮಾಡುವ ಮೂಲಕ ಗೊಂದಲವನ್ನು ಸೃಷ್ಟಿಸಲು ಯತ್ನಿಸುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಸುದರ್ಶನ ಅತಿಥಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಲ್ಲಿ ತೊಡಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ದಿನ ಸನ್ನಿಹಿತವಾಗುತ್ತಿದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಸರ್ಕಾರದ ಇಲ್ಲಿಯವರೆಗಿನ ಆಡಳಿತ ವೈಖರಿಗಳಿಂದ ಬೇಸತ್ತ ಬಂಡವಾಳ ಹೂಡಿಕೆದಾರರು, ನೆರೆಯ ಆಂಧ್ರ, ತೆಲಂಗಾಣದತ್ತ ಮುಖಮಾಡಿದ್ದಾರೆ. ಇದರಿಂದ ರಾಜ್ಯದಲ್ಲಿ ಹೂಡಿಕೆಯಾಗಬೇಕಾಗಿದ್ದ 3.28 ಲಕ್ಷ ಕೋಟಿ ಬಂಡವಾಳಕ್ಕೆ ಬದಲಾಗಿ ಪ್ರಸ್ತುತ ಕೇವಲ 24 ಸಾವಿರ ಕೋಟಿ ರೂ. ಬಂಡವಾಳವಷ್ಟೆ ಹೂಡಿಕೆಯಾಗುತ್ತಿದೆ. ಬಂಡವಾಳ ಹೂಡಿಕೆ ಕುಂಠಿತಗೊಂಡಿರುವುದರಿಂದ ಉದ್ಯೋಗ ಸೃಷ್ಟಿಯೂ ಸ್ಥಗಿತಗೊಂಡಿದ್ದು, ಭ್ರಷ್ಟಾಚಾರ ಮೇರೆ ಮೀರಿದೆ. ಇಂತಹ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ವೇಯೊಂದರಲ್ಲಿ ದೇಶದ ನಂಬರ್ ಒನ್ ಭ್ರಷ್ಟ ಸರ್ಕಾರವಾಗಿ ದಾಖಲಾಗಿದೆಯೆಂದು ಲೇವಡಿ ಮಾಡಿದರು.

ಕೇಂದ್ರದ ಅನುದಾನ ದುರುಪಯೋಗ: ಸ್ವಚ್ಛ ಭಾರತ ಯೋಜನೆಯ ಅನುಷ್ಟಾನಕ್ಕೆ ಕೇಂದ್ರದಿಂದ ರಾಜ್ಯಕ್ಕೆ ದೊಡ್ಡ ಮೊತ್ತದ ಅನುದಾನ ಲಭ್ಯವಾಗಿತ್ತಾದರು ಅದರ ಸಮರ್ಪಕ ಬಳಕೆಯಾಗಿಲ್ಲ. ಬಂದ ಹಣವನ್ನು ನಿಗದಿತ ಉದ್ದೇಶಕ್ಕೆ ಬದಲಾಗಿ ಬೇರೆ ಕಾರ್ಯಗಳಿಗೆ ಬಳಸುವ ಮೂಲಕ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ದೂರಿದರು.

ರಾಜ್ಯದ ಉನ್ನತ ಅಧಿಕಾರಿಗಳಾಗಿದ್ದ ಡಿ.ಕೆ. ರವಿ, ಅನುರಾಗ್ ತಿವಾರಿ, ಕಲ್ಲಪ್ಪ ಹಂಡಿಭಾಗ್, ಡಿವೈಎಸ್ಪಿ ಗಣಪತಿ ಅವರ  ಸಾವಿನ  ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ರಾಜ್ಯ ಸರ್ಕಾರ ನಡೆಸಿದ್ದು, ಸಿಐಡಿ ಮತ್ತು ಎಸಿಬಿಯ ದುರ್ಬಳಕೆಯಾಗಿದೆಯೆಂದು ಆರೋಪಿಸಿದ ಶೋಭಾ ಕರಂದ್ಲಾಜೆ, ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಸುಪ್ರೀಂ ಕೊರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದೆಯಾದರೆ, ಪ್ರಕರಣದ ಸಾಕ್ಷ್ಯಗಳನ್ನು ನಾಶಮಾಡುವ ಪ್ರಯತ್ನ ಸರ್ಕಾರದಿಂದ ನಡೆದಿದೆಯೆಂದು ಕಟುವಾಗಿ ನುಡಿದರು.

ನವೆಂಬರ್2 ರಿಂದ ನವ ಕರ್ನಾಟಕ ಯಾತ್ರೆ- ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ ನವೆಂಬರ್ 2 ರಿಂದ ರಾಜ್ಯದ 17 ಜಿಲ್ಲೆಗಳ 114 ಕ್ಷೇತ್ರಗಳನ್ನು ಸಂಪರ್ಕಿಸುವ ‘ನವ ಕರ್ನಾಟಕ ಯಾತ್ರೆ’ ಬೆಂಗಳೂರಿನಿಂದ ಆರಂಭಗೊಳ್ಳಲಿದೆ. ಇದು ನವೆಂಬರ್ 8 ರಂದು ಕೊಡಗಿಗೆ ಆಗಮಿಸಲಿದೆಯೆಂದು ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರವಿ ಕುಶಾಲಪ್ಪ, ರಾಬಿನ್ ದೇವಯ್ಯ ಸೇರಿದಂತೆ ಹಲ ಪ್ರಮುಖರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News