ಭ್ರಷ್ಟರ ರಕ್ಷಣೆಗೆ ಹುನ್ನಾರ

Update: 2017-10-26 04:36 GMT

ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಪರಿವರ್ತನಾ ರ‍್ಯಾಲಿ ನಡೆಸಿ ಪ್ರತೀ ದಿನ ಒಂದೊಂದು ಹಗರಣಗಳನ್ನು ಜನರ ಮುಂದೆ ಇಡುವುದಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಕರ್ನಾಟಕ ನವನಿರ್ಮಾಣ ಯಾತ್ರೆ ನಡೆಸಿ ಪ್ರತೀ ಊರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿಗೆ ಸವಾಲು ಹಾಕುವುದಾಗಿ ಅವರು ತಿಳಿಸಿದ್ದಾರೆ. ಇವರ ಹೇಳಿಕೆಗೆ ಕೆಲ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಭಾರೀ ಪ್ರಚಾರವೂ ದೊರಕಿದೆ. ಆದರೆ, ಈ ಯಾತ್ರೆ ಮಾಡುವ ಮುನ್ನ ಬಿಜೆಪಿ ನಾಯಕರು ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಂಡರೆ ಒಳ್ಳೆಯದು. ಇಂತಹ ಯಾತ್ರೆ ಮಾಡಲು ತಮಗಿರುವ ನೈತಿಕತೆ ಏನೆಂಬುದನ್ನು ಅವರು ತಮ್ಮನ್ನು ತಾವೇ ಪ್ರಶ್ನಿಸಬೇಕು. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸನ್ನು ನಿರಾಕರಿಸಿ ಬಿಜೆಪಿಗೆ ಜನ ಅತ್ಯಂತ ಹೆಚ್ಚು ಸ್ಥಾನಗಳನ್ನು ನೀಡಿದ್ದರು. ಆಗ ಪೂರ್ಣ ಬಹುಮತ ಸಿಗದಿದ್ದರೂ ಕೂಡಾ ಆಪರೇಶನ್ ಕಮಲ ಮಾಡಿ ಇವರು ಅಧಿಕಾರವನ್ನು ಹಿಡಿದುಕೊಂಡರು. ತಮಗೆ ದೊರಕಿದ್ದ ಅಧಿಕಾರವನ್ನು ಬಿಜೆಪಿ ನಾಯಕರು ಸದ್ಬಳಕೆ ಮಾಡಿಕೊಂಡಿದ್ದರೆ ಮತ್ತೆ ಇಲ್ಲಿ ಕಾಂಗ್ರೆಸ್ ಬರುತ್ತಿರಲಿಲ್ಲ. ಅಧಿಕಾರ ದೊರೆತಾಗ ಇವರು ಏನು ಮಾಡಿದರು ಎಂಬುದು ಕರ್ನಾಟಕದ ಆರು ಕೋಟಿ ಜನರಿಗೆ ಮಾತ್ರವಲ್ಲ, ಈ ದೇಶದ ನೂರು ಕೋಟಿ ಜನರಿಗೂ ಗೊತ್ತಿದೆ. ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ವ್ಯಕ್ತಿ ಭ್ರಷ್ಟಾಚಾರ ಹಾಗೂ ಅಕ್ರಮಗಳ ಹಗರಣಗಳಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದರು. ಅವರ ಮೇಲಿನ ಪ್ರಕರಣಗಳು ಇನ್ನೂ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ. ಆಪರೇಶನ್ ಕಮಲದ ಸೂತ್ರಧಾರಿ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ನಡೆಸಿದ ಗಣಿ ಲೂಟಿ, ಅಲ್ಲಿ ಸ್ಥಾಪಿಸಿಕೊಂಡ ತಮ್ಮದೇ ಸಾಮ್ರಾಜ್ಯ ಆನಂತರ ಅವರು ಜೈಲಿಗೆ ಹೋಗಬೇಕಾಗಿ ಬಂದ ಸನ್ನಿವೇಶ ಎಲ್ಲರಿಗೂ ಗೊತ್ತಿದೆ. ಇನ್ನೊಬ್ಬ ಹಿರಿಯ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೂಡಾ ಸೆರೆಮನೆ ವಾಸ ಮುಗಿಸಿ ಬಂದರು. ಹಿಂದಿನ ಬಿಜೆಪಿ ಸರಕಾರದ ಇಬ್ಬರು ಹಿರಿಯ ಸಚಿವರು ಸದನದಲ್ಲಿ ಬ್ಲೂಫಿಲಂ ನೋಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಇನ್ನೊಬ್ಬ ಸಚಿವರು ಅತ್ಯಾಚಾರದ ಆರೋಪದ ಮೇಲೆ ಮಂತ್ರಿ ಪದವಿ ಕಳೆದುಕೊಳ್ಳಬೇಕಾಯಿತು. ಇಂತಹವರೆಲ್ಲಾ ಸೇರಿಕೊಂಡು ನಡೆಸಲು ಹೊರಟಿರುವ ಕರ್ನಾಟಕ ನವನಿರ್ಮಾಣ ಯಾತ್ರೆ ಎಷ್ಟರ ಮಟ್ಟಿಗೆ ಜನರ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಕನಿಷ್ಠ ಮೈಗೆ ಹೊಲಸನ್ನು ಮೆತ್ತಿಕೊಂಡವರನ್ನು ದೂರ ಇಟ್ಟು ಹೊಸ ನಾಯಕರ ನೇತೃತ್ವದಲ್ಲಿ ಯಾತ್ರೆ ಮಾಡಿದ್ದರೆ ಯಶಸ್ವಿ ಯಾಗಬಹುದಿತ್ತೇನೋ. ಆದರೆ, ಈಗ ಯಾತ್ರೆಗೆ ಹೊರಟವರೆಲ್ಲ ಒಂದಿಲ್ಲೊಂದು ಆರೋಪಕ್ಕೆ ಗುರಿಯಾದವರೇ ಆಗಿದ್ದಾರೆ. ಈಗಿನ ರಾಜ್ಯಸರಕಾರದ ಮೇಲೆ ಆರೋಪ ಮಾಡಲು ಹೋಗಿ ಮಾಜಿ ಸಚಿವೆ ಹಾಗೂ ಹಾಲಿ ಸಂಸದೆಯೊಬ್ಬರು ಭಾರೀ ಹಗರಣವೊಂದರಲ್ಲಿ ಸಿಕ್ಕಿಬಿದ್ದಿದ್ದಾರೆ.

ಕರ್ನಾಟಕದ ಹಿಂದಿನ ಕಥೆ ಒಂದೆಡೆ ಇರಲಿ. ಈಗ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಾದರೂ ಪಾರದರ್ಶಕ ಆಡಳಿತವನ್ನು ಆ ಪಕ್ಷ ನೀಡುತ್ತಿದೆಯೇ ಎಂಬ ಪ್ರಶ್ನೆ ನಮ್ಮ ಮುಂದಿದೆ. ರಾಜಸ್ಥಾನದಲ್ಲ್ಲೂ ಕೂಡಾ ಬಿಜೆಪಿ ಸರಕಾರವಿದೆ. ವಸುಂಧರಾ ರಾಜೇ ಆ ರಾಜ್ಯದ ಮುಖ್ಯಮಂತ್ರಿ. ಅಲ್ಲಿನ ಸರಕಾರ ಇತ್ತೀಚೆಗೆ ಮಾಡಿದ ಸುಗ್ರೀವಾಜ್ಞೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಹಾಲಿ ಹಾಗೂ ನಿವೃತ್ತ ನ್ಯಾಯಾಧೀಶರು ಮತ್ತು ಸರಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಹಗರಣಗಳ ತನಿಖಾ ವರದಿಯನ್ನು ಪ್ರಸಾರ ಅಥವಾ ಪ್ರಕಟನೆ ಮಾಡಬಾರದೆಂದು ಮಾಧ್ಯಮಗಳಿಗೆ ಮೂಗುದಾರ ಹಾಕುವ ಸುಗ್ರೀವಾಜ್ಞೆಯೊಂದನ್ನು ಅಲ್ಲಿ ಹೊರಡಿಸಲಾಗಿದೆ. ನ್ಯಾಯಾಧೀಶರು ಹಾಗೂ ಅಧಿಕಾರಿಗಳ ಮೇಲೆ ಯಾವುದೇ ತನಿಖೆ ನಡೆಸಬೇಕಾದರೆ ಇನ್ನು ಮುಂದೆ ಸರಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಕಾನೂನಿಗೆ ತಿದ್ದುಪಡಿ ತರಲಾಗಿದೆ. ಸರಕಾರ ಅನುಮತಿ ನೀಡಿದ ಬಳಿಕ ತನಿಖೆಯ ಅವಧಿ ಮುಗಿಯುವ ವರೆಗೆ ಯಾವುದೇ ಮಾಧ್ಯಮಗಳು ಆರೋಪಕ್ಕೆ ಒಳಗಾದ ಹಾಲಿ ಹಾಗೂ ನಿವೃತ್ತ ನ್ಯಾಯಾಧೀಶರು ಅಥವಾ ಅಧಿಕಾರಿಗಳ ಹೆಸರುಗಳನ್ನು ಪ್ರಕಟಿಸುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಅಂತಹವರನ್ನು ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಈ ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ. ಇನ್ನೂ ವಿಶೇಷವೆಂದರೆ ಈ ಸುಗ್ರೀವಾಜ್ಞೆಯ ವ್ಯಾಪ್ತಿಗೆ ಸಚಿವರನ್ನೂ ಸೇರಿಸುವ ಪ್ರಯತ್ನವೂ ನಡೆದಿದೆ. ಈ ಸುಗ್ರಿವಾಜ್ಞೆಯ ಪ್ರಕಾರ ಸಂವಿಧಾನದ ನಾಲ್ಕನೆ ಆಧಾರಸ್ತಂಭ ಎಂಬ ಪ್ರತೀತಿಯನ್ನು ಹೊಂದಿರುವ ಮಾಧ್ಯಮಗಳು ಇನ್ನು ಮುಂದೆ ಭ್ರಷ್ಟಾಚಾರ ಆರೋಪಿಯ ಹೆಸರನ್ನು ಪ್ರಕಟಿಸುವ ಸ್ವಾತಂತ್ರವನ್ನು ಕಳೆದುಕೊಳ್ಳುತ್ತವೆ. ನ್ಯಾಯಾಧೀಶರು ಹಾಗೂ ಹಿರಿಯ ಅಧಿಕಾರಿಗಳ ಮೇಲೆ ಖಾಸಗಿ ದೂರು ಬಂದರೆ ಅವರ ಮೇಲೆ ತನಿಖೆಗೆ ಆದೇಶ ನೀಡಬೇಕೋ ನೀಡಬಾರದೋ ಎಂಬ ಬಗ್ಗೆ ಸರಕಾರ ಆರು ತಿಂಗಳಲ್ಲಿ ನಿರ್ಧರಿಸುತ್ತದಂತೆ!

ಬಿಜೆಪಿ ತಾನು ಉಳಿದ ಪಕ್ಷಗಳಿಗಿಂತ ಭಿನ್ನವಾದ ಪ್ರಾಮಾಣಿಕ ಪಕ್ಷ ಎಂದು ಹೇಳಿಕೊಳ್ಳುತ್ತಾ ಬಂದಿದೆ. ಇಂತಹ ಪಕ್ಷಕ್ಕೆ ಅಧಿಕಾರ ದೊರೆತಾಗ ಅದು ಹೇಗೆ ನಡೆದುಕೊಳ್ಳುತ್ತದೆ ಎಂಬುದಕ್ಕೆ ಕರ್ನಾಟಕದ ಬಳಿಕ ರಾಜಸ್ಥಾನ ಇನ್ನೊಂದು ಉದಾಹರಣೆಯಾಗಿದೆ. ನಿವೃತ್ತ ನ್ಯಾಯಾಧೀಶರು ಮತ್ತು ಸರಕಾರಿ ಅಧಿಕಾರಿಗಳ ಮೇಲೆ ತನಿಖೆ ಮಾಡಲು ಸರಕಾರದ ಪೂರ್ವಾನುಮತಿ ಪಡೆಯಬೇಕೆಂಬ ಅಂಶ ಅಷ್ಟೇ ಸುಗ್ರೀವಾಜ್ಞೆಯಲ್ಲಿದ್ದಿದ್ದರೆ ಅಂತಹ ವಿವಾದ ಉಂಟಾಗುತ್ತಿರಲಿಲ್ಲ. ಕೆಲ ರಾಜ್ಯಗಳಲ್ಲಿ ಅಂತಹ ನಿಯಮವೂ ಇದೆ. ಆದರೆ, ರಾಜಸ್ಥಾನದ ಬಿಜೆಪಿ ಸರಕಾರ ಇನ್ನೂ ಒಂದು ಮುಂದೆ ಹೋಗಿ ಸರಕಾರ ಅನುಮತಿ ಕೊಡುವವರೆಗೆ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಬಾರದು ಮತ್ತು ಪ್ರಸಾರ ಮಾಡಬಾರದು, ಮಾಡಿದರೆ ಎರಡು ವರ್ಷ ಜೈಲು ಶಿಕ್ಷೆ ಎಂದು ಸುಗ್ರೀವಾಜ್ಞೆ ಹೊರಡಿಸಿರುವುದು ಜನತಂತ್ರಕ್ಕೆ ಅಪಚಾರ ಬಗೆವ ಸರ್ವಾಧಿಕಾರಿ ವರ್ತನೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಡುವ ಎಲ್ಲರೂ ಇದನ್ನು ಖಂಡಿಸಬೇಕಾಗಿದೆ. ಭ್ರಷ್ಟಾಚಾರ ಎಂಬುದು ತಮ್ಮ ಸಾಮಾಜಿಕ ಜೀವನದ ಎಲ್ಲ ಕ್ಷೇತ್ರಗಳನ್ನು ಆವರಿಸಿದೆ. ಪಿಡುಗಿನಂತೆ ಹಬ್ಬುತ್ತಿರುವ ಈ ಭ್ರಷ್ಟಾಚಾರವನ್ನು ಕಣ್ಣಾರೆ ಕಂಡು ಮಾಧ್ಯಮಗಳು ಕಣ್ಣುಮುಚ್ಚಿ ಕುಳಿತುಕೊಳ್ಳಲು ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳ ಕೈಕಟ್ಟಿಹಾಕುವ ಯತ್ನ ಖಂಡನೀಯವಾಗಿದೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಹೀಗೆ ಎಲ್ಲ ಕಡೆ ಭ್ರಷ್ಟಾಚಾರದ ದೂರುಗಳು ಕೇಳಿ ಬರುತ್ತಲೇ ಇವೆ. ಪ್ರತಿಪಕ್ಷಗಳು ಈ ಬಗ್ಗೆ ಆರೋಪ ಮಾಡಿದಾಗ ಮಾಧ್ಯಮಗಳು ಅದನ್ನು ಪ್ರಕಟಿಸಲೇ ಬೇಕಾಗುತ್ತದೆ. ಅದನ್ನು ಪ್ರಕಟಿಸಬಾರದೆಂದು ನಿರ್ಬಂಧ ಹೇರುವುದು ಸರಿಯಲ್ಲ.

ಪತ್ರಿಕಾ ಸ್ವಾತಂತ್ರದ ಬಗ್ಗೆ ಸಂವಿಧಾನದಲ್ಲಿ ನಿರ್ದಿಷ್ಟ ಉಲ್ಲೇಖವಿಲ್ಲ. ಆದರೂ ಮೂಲಭೂತ ಮತ್ತು ವಾಕ್ ಸ್ವಾತಂತ್ರದಲ್ಲೇ ಅದು ಅಡಕವಾಗಿದೆ. ಅಂತಲೇ ನಮ್ಮ ಜನತಂತ್ರದ ಆರೋಗ್ಯ ಕಾಪಾಡಲು ಮಾಧ್ಯಮಗಳು ಈವರೆಗೆ ಸಾಕಷ್ಟು ಶ್ರಮವಹಿಸಿವೆ. ರಾಜಸ್ಥಾನದ ಬಿಜೆಪಿ ಸರಕಾರ ತರಲು ಹೊರಟಿರುವ ಈ ಕರಾಳ ಕಾನೂನಿಗೆ ಅಲ್ಲಿನ ವಿಧಾನಸಭೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ತೀವ್ರ ವಿರೋಧ ಬಂದ ಆನಂತರ ಇದರ ಬಗ್ಗೆ ಪರಿಶೀಲನೆಗೆ ಸದನ ಸಮಿತಿಯನ್ನು ರಚಿಸಲಾಗಿದೆ. ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಇಂತಹ ಸುಗ್ರೀವಾಜ್ಞೆಯನ್ನು ತರಲಾಗಿದೆ ಎಂದು ಹೇಳಲಾಗಿದ್ದರೂ ಆ ನೆಪದಲ್ಲಿ ಮಾಧ್ಯಮಗಳ ಕತ್ತು ಹಿಸುಕುವ ಹೇಯ ಕೃತ್ಯಕ್ಕೆ ರಾಜಸ್ಥಾನದ ಬಿಜೆಪಿ ಸರಕಾರ ಕೈ ಹಾಕುವುದು ಖಂಡನೀಯ.

ಬಿಜೆಪಿ ಸರಕಾರ ಮಾತ್ರವೇ ಮಾಧ್ಯಮಗಳಿಗೆ ಕಡಿವಾಣ ಹಾಕಲು ಹೊರಟಿದೆ ಎಂದು ಅರ್ಥವಲ್ಲ. ಈ ಹಿಂದೆ ಬೇರೆ ಪಕ್ಷಗಳ ರಾಜ್ಯ ಸರಕಾರಗಳೂ ಮಾಧ್ಯಮಗಳನ್ನು ಕೈಕಟ್ಟಿಹಾಕಲು ಯತ್ನಿಸಿದ ಉದಾಹರಣೆಗಳಿವೆ. ರಾಮಕೃಷ್ಣ ಹೆಗಡೆಯವರು ಮುಖ್ಯ ಮಂತ್ರಿಯಾಗಿದ್ದಾಗ ಕರ್ನಾಟಕದಲ್ಲಿ ಪತ್ರಿಕಾ ಸ್ವಾತಂತ್ರವನ್ನು ನಿಯಂತ್ರಣಕ್ಕೆ ಒಳಪಡಿಸುವ ಮಸೂದೆಯೊಂದನ್ನು ತರಲಾಗಿತ್ತು. ತೀವ್ರ ವಿರೋಧ ಬಂದ ಆನಂತರ ಅದನ್ನು ಹಿಂದಕ್ಕೆ ತೆಗೆದುಕೊಳ್ಳಲಾಯಿತು. ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಕೂಡಾ ಪತ್ರಿಕೆಗಳಿಗೆ ಕಡಿವಾಣ ಹಾಕಿದ್ದರು. ಅದಕ್ಕೆ ಅವರು ಭಾರೀ ಬೆಲೆ ತೆರಬೇಕಾಯಿತು. ಆಗ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದ ಹೆಗ್ಗಳಿಕೆ ಹೊಂದಿರುವ ಪಕ್ಷಗಳು ಕೂಡಾ ತಮಗೆ ಅಧಿಕಾರ ದೊರೆತಾಗ ಇಂತಹ ದುಸ್ಸಾಹಸಕ್ಕೆ ಕೈ ಹಾಕುತ್ತವೆ.

ಅನೇಕ ಬಾರಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳಿಂದ ಪ್ರಾಮಾಣಿಕ ಅಧಿಕಾರಿಗಳಿಗೆ ತೊಂದರೆ ಉಂಟಾಗುತ್ತದೆ. ಅಂತಹವರಿಗೆ ರಕ್ಷಣೆ ನೀಡಲು ಇಂತಹ ಕಾನೂನು ರಚಿಸುವುದು ಅನಿವಾರ್ಯ ಎಂದು ರಾಜಸ್ಥಾನ ಸರಕಾರ ಸಮರ್ಥಿಸಿಕೊಂಡಿದೆ. ಆದರೆ, ಒಬ್ಬಿಬ್ಬರು ಪ್ರಾಮಾಣಿಕ ಅಧಿಕಾರಿಗಳ ರಕ್ಷಣೆಯ ಹೆಸರಿನಲ್ಲಿ ಮಾಧ್ಯಮಗಳ ಕೈಕಟ್ಟಿ ಹಾಕುವುದರಿಂದ ಪ್ರಜಾಪ್ರಭುತ್ವಕ್ಕೆ ಅಪಚಾರ ಬಗೆದಂತೆ ಆಗುತ್ತದೆ. ಇದರಿಂದ ಭ್ರಷ್ಟಾಚಾರಿಗಳಿಗೆ ರಕ್ಷಣೆ ಸಿಗುತ್ತದೆ. ಸರಕಾರಿ ಅಧಿಕಾರಿಗಳ ಅಕ್ರಮಕ್ಕೆ ಅಂಕುಶವೇ ಇಲ್ಲದಂತಾಗುತ್ತದೆ. ಅಂತಲೇ ಈ ಮಸೂದೆಗೆ ರಾಜಸ್ಥಾನ ವಿಧಾನಸಭೆಯ ಬಿಜೆಪಿಯ ಇಬ್ಬರು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಸಂದರ್ಭದಲ್ಲೂ ಮಾಧ್ಯಮಗಳ ಹಕ್ಕಿಗೆ ಚ್ಯುತಿ ಬರದಂತೆ ಎಲ್ಲ ಸರಕಾರಗಳು ನೋಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News