×
Ad

ಮಂಡ್ಯ: ​ಕರ್ನಾಟಕ ಕಾರ್ಮಿಕ ಸಮ್ಮೇಳನಕ್ಕೆ ಒತ್ತಾಯಿಸಿ ಧರಣಿ

Update: 2017-10-25 23:40 IST

ಮಂಡ್ಯ, ಅ.25: ಭಾರತೀಯ ಕಾರ್ಮಿಕ ಮಾದರಿಯಲ್ಲಿ ಕರ್ನಾಟಕ ಕಾರ್ಮಿಕ ಸಮ್ಮೇಳನ ನಡೆಸಿ ತಮ್ಮ ಹಕ್ಕೋತ್ತಾಯಗಳ ಅನುಷ್ಠಾನಗೊಳಿಸಲು ಒತ್ತಾಯಿಸಿ ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಧರಣಿ ನಡೆಸಲಾಯಿತು.

ಸಿಲ್ವರ್ ಜುಬಿಲಿ ಪಾರ್ಕ್‌ನಿಂದ ಮೆರವಣಿಗೆಯಲ್ಲಿ ತೆರಳಿದ ಅಂಗನವಾಡಿ ಅಕ್ಷರ ದಾಸೋಹ, ಗ್ರಾಪಂ ನೌಕರರು, ಆಶಾ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು ಮತ್ತಿತರ ಸಂಘಟನೆಗಳ ಸದಸ್ಯರು ಕಾರ್ಮಿಕ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ವೈಸರಾಯ್ ಆ್ಯಂಡ್ ಹಿಸ್ ಕೌನ್ಸಿಲ್‌ನಲ್ಲಿ ಕಾರ್ಮಿಕ ಸಚಿವರಾಗಿದ್ದ ಡಾ.ಅಂಬೇಡ್ಕರ್ 75ನೆ ವರ್ಷಾಚರಣೆ ಸಂದರ್ಭದಲ್ಲಿ ಡಿಸೆಂಬರ್ 6 ರಂದು ನಡೆಸಿದ್ದ ಕರ್ನಾಟಕ ಕಾರ್ಮಿಕ ಸಮ್ಮೇಳನ ಐತಿಹಾಸಿಕವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಕರ್ನಾಟಕ ಕಾರ್ಮಿಕ ಸಮ್ಮೇಳನಕ್ಕೆ ಎಲ್ಲ ಕೇಂದ್ರ ಕಾರ್ಮಿಕ ಸಂಘಟನೆಗಳ ಸದಸ್ಯತ್ವ ಆಧಾರಿತ ಪ್ರಾತಿನಿಧ್ಯವನ್ನು ನೀಡುವ ಮೂಲಕ ಸಮಪ್ರಮಾಣದಲ್ಲಿ ಮಾಲಕರು, ಕಾರ್ಮಿಕರು ಮತ್ತು ಸರಕಾರದ ಪ್ರತಿನಿಧಿಗಳು ಭಾರತೀಯ ಕಾರ್ಮಿಕ ಸಮ್ಮೇಳನದ ರೀತಿಯಲ್ಲಿ ಇದ್ದರೆ ಉತ್ತಮ ಎಂದು ತಿಳಿಸಲಾಯಿತು.

ಪ್ರಥಮ ಕರ್ನಾಟಕ ಕಾರ್ಮಿಕ ಸಮ್ಮೇಳನದ ಕಾರ್ಯಸೂಚಿಯಡಿ ಎಲ್ಲ ಅನುಸೂಚಿತ ಉದ್ಯೋಗಗಳಿಗೂ 18 ಸಾವಿರ ರೂ. ಸಮಾನ ವೇತನ ನಿಗದಿಗೊಳಿಸಿ ಒಂದೇ ಅಧಿಸೂಚನೆಯನ್ನು ಹೊರಡಿಸಬೇಕು. ಅಸ್ಸಾಂ ಮತ್ತು ತಮಿಳುನಾಡು ಮಾದರಿಯಲ್ಲಿ ಖಾಯಂ ಸ್ಥಾನಮಾನ ಕಲ್ಪಿಸುವ ಶಾಸನ ರೂಪಿಸಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ಕಾರ್ಮಿಕ ಸಂಘಗಳ ಕಡ್ಡಾಯ ಶಾಸನಾತ್ಮಕ ಮಾನ್ಯತೆಗೆ ಶಾಸನ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಪಶ್ಚಿಮ ಬಂಗಾಳ ಮಾದರಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ ಶಾಸನ ಜಾರಿಗೊಳಿಸಿ ರಾಜ್ಯ ಬಜೆಟ್‌ನಲ್ಲಿ ನಿಧಿ ಮೀಸಲಿರಿಸಿ ಕರ್ನಾಟಕ ರಾಜ್ಯ ಸಾಮಾಜಿಕ ಭದ್ರತಾ ನಿಧಿ ಸ್ಥಾಪಿಸಬೇಕು. ಭಾರತೀಯ ಕಾರ್ಮಿಕ ಸಮ್ಮೇಳನದಲ್ಲಿ ಅಂಗೀಕರಿಸುವಂತೆ ಅಂಗನವಾಡಿ, ಬಿಸಿಯೂಟ, ಆಶಾ ಮುಂತಾದ ಯೋಜನೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು. ಪಂಚಾಯತ್ ಮತ್ತು ಸ್ಥಳೀಯ ನೌಕರರ ವೇತನವನ್ನು ರಾಜ್ಯ ಬಜೆಟ್‌ನ ಯೋಜನೇತರ ವೆಚ್ಚದ ವ್ಯಾಪ್ತಿಗೆ ತರಬೇಕು. ಎಲ್ಲ ಜಿಲ್ಲೆಗಳಲ್ಲೂ ಕಾರ್ಮಿಕ ನ್ಯಾಯಾಲಯ ಸ್ಥಾಪಿಸಬೇಕು ಎಂದು ಆಗ್ರಹಿಸಲಾಯಿತು.

ಈ ಸಂದರ್ಭ ಸಿಐಟಿಯು ಜಿಲ್ಲಾಧ್ಯಕ್ಷ ಜಿ.ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಉಪಾಧ್ಯಕ್ಷರಾದ ಮಹದೇವಮ್ಮ, ನಾಗರಾಜು, ಜಯಲಕ್ಷ್ಮಮ್ಮ, ಎಸ್.ಬಿ.ರಾಮು, ಎಂ.ಶಿವಕುಮಾರ್, ಜಿ.ಆರ್.ರಾಮು, ಎಂ.ರವೀಂದ್ರ ಮತ್ತಿತರರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News