×
Ad

ಸಂವೇದನಾಶೀಲ ಯುವಜನರು ರಾಜಕಾರಣಕ್ಕೆ ಬರಬೇಕು: ಮಂಗಳೂರು ವಿಜಯ

Update: 2017-10-27 22:36 IST

ಸಿರಾ, ಅ.27: ಮೌಲ್ಯಯುತ ಮತ್ತು ಜನಪರವಾದ ರಾಜಕಾರಣ ನೆಲೆಗೊಳ್ಳಬೇಕಿದ್ದರೆ ಸಂವೇದನಾಶೀಲ ಯುವಜನರು ರಾಜಕಾರಣಕ್ಕೆ ಬರಬೇಕು ಎಂದು ಹಿರಿಯ ಚಿಂತಕ ಮಂಗಳೂರು ವಿಜಯ ಅಭಿಪ್ರಾಯಪಟ್ಟಿದ್ದಾರೆ.

ಸಿಎಂಸಿಎ ಬೆಂಗಳೂರು ಹಾಗೂ ತುಮಕೂರು ಜಿಲ್ಲೆಯ ವಿವಿಧ ಯುವಜನ ಸಂಘಗಳ ಸಹಯೋಗದಲ್ಲಿ ಸಿರಾ ತಾಲೂಕು ಚಿಕ್ಕನಹಳ್ಳಿಯಲ್ಲಿ ಏರ್ಪಡಿಸಿದ್ದ ಸಕಾರಾತ್ಮಕ ರಾಜಕಾರಣ ಎಂಬ ಎರಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ಸಮ ಸಮಾಜ ನಿರ್ಮಾಣ ಮಾಡಲು ಅಗತ್ಯವಾದ ಜ್ಞಾನ ಮತ್ತು ಮನೋ ಭಾವವನ್ನು ಬೆಳೆಸಿಕೊಂಡು ಮುನ್ನಡೆಯಬೇಕು. ಗಾಂಧಿ, ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್, ರಾಮ್‍ಮನೋಹರ್ ಲೋಯಿಯಾರಂತಹ ಪ್ರಜಾಪರವಾದ ಸೈದ್ಧಾಂತಿಕ ನಿಲುವುಗಳೊಂದಿಗೆ ರಾಜಕಾರಣ ನಡೆಸಿದರೆ ಮಾತ್ರ ಪ್ರಜಾಪ್ರಭುತ್ವ ಸಧೃಡಗೊಳ್ಳುತ್ತದೆ ಎಂದರು. 

ಯುವಜನ ಕಾರ್ಯಕರ್ತ ತಿಪ್ಪೇಸ್ವಾಮಿ ಕೆ.ಟಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಸದಾ ಜಾಗೃತರಾಗಿರಬೇಕಿರುವುದು ಅತ್ಯಗತ್ಯ. ಇಲ್ಲವಾದಲ್ಲಿ ಪ್ರಜಾಪ್ರಭುತ್ವದ ಆಶಯಗಳು ಮಣ್ಣುಪಾಲಾಗಲಿವೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಇನ್ನೂ ನಮ್ಮ ದೇಶವನ್ನು ಹಸಿವು ಮುಕ್ತ, ಜಾತಿ ಮುಕ್ತ, ಬಡತನ ಮುಕ್ತ, ಭ್ರಷ್ಟಾಚಾರ ಮುಕ್ತ ಮಾಡಲು ಸಾಧ್ಯವಾಗಿಲ್ಲ. ಇದು ನಮ್ಮ ರಾಜಕಾರಣದ ಮತ್ತು ರಾಜಕಾರಣಿಗಳ ಬದ್ಧತೆಯನ್ನು ಪ್ರಶ್ನಿಸುತ್ತದೆ. ಅಲ್ಲದೆ ಮತದಾರರ ಅರಿವಿನ ಮಟ್ಟವನ್ನು ಎತ್ತಿ ತೋರಿಸುತ್ತದೆ ಎಂದರು. 

ಕಾರ್ಯಾಗಾರದಲ್ಲಿ ಸಿರಾ, ಗುಬ್ಬಿ ಮತ್ತು ತಿಪಟೂರು ತಾಲೂಕಿನ ವಿವಿಧ ಯುವಜನ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News