×
Ad

ಸ್ಮಶಾನದ ಜಾಗಕ್ಕಾಗಿ ಅಹೋರಾತ್ರಿ ಧರಣಿ: ಕೆ.ಮೊಣ್ಣಪ್ಪ

Update: 2017-10-27 23:49 IST

ಮಡಿಕೇರಿ, ಅ.27: ಹೊದ್ದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲೇಮಾಡಿನಲ್ಲಿ ಸ್ಮಶಾನದ ವಿವಾದ ಮತ್ತೊಮ್ಮೆ ಜೀವ ಪಡೆಯುತ್ತಿದ್ದು, ಶವ ಸಂಸ್ಕಾರ ಮಾಡಿದ ಜಾಗದಲ್ಲೇ 2 ಎಕರೆ ಭೂಮಿಯನ್ನು ಸ್ಮಶಾನಕ್ಕಾಗಿ ಮೀಸಲಿಡಬೇಕೆಂದು ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಲು ಬಹುಜನ ಕಾರ್ಮಿಕರ ಸಂಘ ನಿರ್ಧರಿಸಿದೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಮೊಣ್ಣಪ್ಪ, ಶವ ಸಂಸ್ಕಾರ ಮಾಡಿರುವ ಜಾಗದಲ್ಲಿ ಶೆಡ್‌ನ್ನು ನಿರ್ಮಿಸಿ ಅ. 28ರಿಂದ ಧರಣಿ ಸತ್ಯಾಗ್ರಹವನ್ನು ಆರಂಭಿಸುವುದಾಗಿ ತಿಳಿಸಿದರು.

ಅ.29ರ ಒಳಗೆ ಜಿಲ್ಲಾಡಳಿತದಿಂದ ಸೂಕ್ತ ಸ್ಪಂದನೆ ದೊರಕದಿದ್ದಲ್ಲಿ ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಹೋರಾಟವನ್ನು ನಡೆಸಲಾಗುವುದು. 2012 ಡಿಸೆಂಬರ್ ತಿಂಗಳಿನಲ್ಲಿ 2 ಎಕರೆ ಜಾಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸ್ಮಶಾನಕ್ಕಾಗಿ ಮಂಜೂರು ಮಾಡಲಾಗಿತ್ತು. ಈ ಜಾಗದಲ್ಲಿ ಕಳೆೆದ 10 ವರ್ಷಗಳಿಂದ ಸುಮಾರು 45ಕ್ಕೂ ಅಧಿಕ ಶವಗಳನ್ನು ಸಂಸ್ಕಾರ ಮಾಡಲಾಗಿದೆ. ಮಂಜೂರಾತಿಯ ಆರ್‌ಟಿಸಿ ಕೂಡ ಇದ್ದು, ಇದನ್ನು ಜಿಲ್ಲಾಡಳಿತ ದುರಸ್ತಿ ಪಡಿಸಬೇಕಾಗಿದೆ. ಖುದ್ದು ರಾಜ್ಯ ಕಂದಾಯ ಕಾರ್ಯದರ್ಶಿಗಳೇ ಸ್ಮಶಾನಕ್ಕೆ ಜಮೀನನ್ನು ಮೀಸಲಿಡುವಂತೆ ತಿಳಿಸಿದ್ದರು ಜಿಲ್ಲಾಡಳಿತ ಶ್ರೀಮಂತರ ಪರವಾಗಿ ಕಾರ್ಯ ನಿರ್ವಹಿಸುತ್ತಿದೆಯೆಂದು ಮೊಣ್ಣಪ್ಪ ಆರೋಪಿಸಿದರು.
 ವಾಟೆಕಾಡಿನಲ್ಲಿ 2 ಎಕರೆ ಭೂಮಿಯನ್ನು ಸ್ಮಶಾನಕ್ಕಾಗಿ ಗುರುತಿಸಿ ಜಿಲ್ಲಾಡಳಿತ ಕಾಮಗಾರಿಯನ್ನು ಆರಂಭಿಸಿದೆ. ಇದನ್ನು ವಿರೋಧಿಸುವುದಾಗಿ ತಿಳಿಸಿದ ಅವರು, ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು. ಇದನ್ನು ಮೀರಿ ಕಾಮಗಾರಿ ಮುಂದುವರಿಸಿದರೆ ಎಸ್ಸಿ,ಎಸ್ಟಿ ಸೇರಿದ ಅನುದಾನ ದುರುಪಯೋಗವಾಗುತ್ತಿರುವ ಬಗ್ಗೆ ಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿದ್ದ ಹೊದ್ದೂರು ಗ್ರಾಪಂ ಉಪಾಧ್ಯಕ್ಷೆ ಪಿ.ಎ.ಕುಸುಮಾವತಿ, ಪರ್ಯಾಯ ಜಾಗದಲ್ಲಿ ಸ್ಮಶಾನವನ್ನು ನೀಡುವುದನ್ನು ವಿರೋಧಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News