ಲಿಂಗವಿರದೇ ಸೀಮೆಯ ಕಲ್ಲಿನಲ್ಲಿ?

Update: 2017-10-27 18:49 GMT

‘‘ಲಿಂಗವಿರದೇ ಸೀಮೆಯ ಕಲ್ಲಿನಲ್ಲಿ?
 ಲಿಂಗವಿರದೇ ಪಶುವಿನ ತೊಡೆಯಲ್ಲಿ?
 ಕಲ್ಲ ತೆಕ್ಕೊಂಡು ಮೆಳೆಯ ಮೇಲೆ ಇಟ್ಟಡೆ,
 ಆ ಕಲ್ಲು ಮೆಳೆಯಲ್ಲಿ ಸಿಕ್ಕಿದಡೆ, ಆ ಮೆಳೆ ಭಕ್ತನಾಗಬಲ್ಲುದೆ?
 ಇದು ಕಾರಣ ಸತ್ಯ, ಸಹಜ, ಸದ್ಭಾವ, ಸದ್ವರ್ತನೆ ಉಳ್ಳಡೆ ಸದ್ಭಕ್ತ,
 ಇಲ್ಲದಿದ್ದಡೆ ಆ ಮೆಳೆಯೊಳಗೆ ಸಿಕ್ಕಿದ ಕಲ್ಲಿನಂತೆ
 ಕಾಣಾ ಕೂಡಲಸಂಗಮದೇವಾ.’’

                                           - ಬಸವಣ್ಣ

ವಿಶ್ವದ ಬಹುಪಾಲು ಧರ್ಮಗಳ ಅನುಯಾಯಿಗಳು ಬಾಹ್ಯಾಚರಣೆಯಲ್ಲಿಯೇ ಬದುಕನ್ನು ಸವೆಸುತ್ತಾರೆ. ಧರ್ಮದ ನಿಜಾಚರಣೆಯಿಂದ ಮಾತ್ರ ನಾವು ಧರ್ಮವನ್ನು ರಕ್ಷಿಸಬಲ್ಲೆವು. ಆಗ ಆ ಧರ್ಮ ನಮ್ಮನ್ನು ರಕ್ಷಿಸಬಲ್ಲುದು. ಅಂದರೆ ನಾವು ಸತ್ಯವಂತರಾಗಿ, ಸದ್ಭಾವನೆ ಮತ್ತು ಸದ್ವರ್ತನೆಗಳೊಂದಿಗೆ ಬದುಕಿದಾಗ ಮಾತ್ರ ನಿಜಾಚರಣೆಯೊಂದಿಗೆ ಬದುಕಿದಂತಾಗುವುದು.

ವಿವಿಧ ಹೆಸರಿನ ಧರ್ಮಗಳ ಬಾಹ್ಯಾಚರಣೆಗಳು ಬೇರೆಬೇರೆಯಾಗಿರುತ್ತವೆ. ಆದರೆ ಎಲ್ಲ ಧರ್ಮಗಳ ಒಳಗೆ ಒಂದೇ ವಿಶ್ವಧರ್ಮ ಇರುತ್ತದೆ. ಅದು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವಂಥದ್ದಾಗಿರುತ್ತದೆ. ವಿವಿಧ ಧರ್ಮಗಳ ಬಾಹ್ಯಾಚರಣೆ ಬೇರೆ ಬೇರೆ ಇದ್ದರೂ ಅವು ಮೂಲಸ್ವರೂಪದಲ್ಲಿ ಸಕಲಜೀವಾತ್ಮರಿಗೆ ಲೇಸನ್ನೇ ಬಯಸುವಂಥವುಗಳಾಗಿವೆ. ಜೀವಕಾರುಣ್ಯವೇ ಎಲ್ಲ ಧರ್ಮಗಳ ತಾಯಿಬೇರಾಗಿದೆ. ಈ ಜೀವಕಾರುಣ್ಯವನ್ನು ಹೊಂದಿದಾತ ಸತ್ಯವಂತನಾಗಿರುತ್ತಾನೆ. ಸದ್ಭಾವನೆಗಳನ್ನು ಹೊಂದಿರುತ್ತಾನೆ. ಅಲ್ಲದೆ ಸದ್ವರ್ತನೆಯೊಂದಿಗೆ ದೈನಂದಿನ ಬದುಕನ್ನು ಸಾಗಿಸುತ್ತಾನೆ. ಯಾವುದೇ ಧರ್ಮಕ್ಕೆ ಸೇರಿದವನಾಗಿದ್ದರೂ ಭಗವಾನ್ ಬುದ್ಧ ಹೇಳಿದ ಮತ್ತು ಶರಣರು ಬದುಕಿ ತೋರಿಸಿದ ಪ್ರಜ್ಞೆ, ಶೀಲ ಹಾಗೂ ಕರುಣೆಯನ್ನು ಮೈಗೂಡಿಸಿಕೊಂಡೇ ಬದುಕಬೇಕಾಗುತ್ತದೆ.

ಪ್ರಜ್ಞೆಯ ಮೂಲಕ ಭೌತಿಕ ಪ್ರಪಂಚದಲ್ಲಿ ವ್ಯವಹರಿಸಬೇಕು. ಶೀಲದ ಮೂಲಕ ಆಧ್ಯಾತ್ಮಿಕ ಪ್ರಪಂಚವನ್ನು ಅರಿತುಕೊಳ್ಳಬೇಕು. ಕರುಣೆಯ ಮೂಲಕ ಭಾವನಾ ಪ್ರಪಂಚವನ್ನು ಹೊಂದಬೇಕು. ಇದಕ್ಕಾಗಿ ಬುದ್ಧ ಮತ್ತು ಬಸವಣ್ಣನವರು ಎರಡು ಮಾರ್ಗಗಳನ್ನು ತಿಳಿಸಿದ್ದಾರೆ. ಒಂದು ಸಮಾಧಿ ಮಾರ್ಗ ಮತ್ತು ಇನ್ನೊಂದು ಪ್ರಜ್ಞಾ ಮಾರ್ಗ. ಸಮಾಧಿ ಮಾರ್ಗದಿಂದ ಆಧ್ಯಾತ್ಮಿಕ ಮತ್ತು ಭಾವನಾ ಪ್ರಪಂಚಗಳ ಅರಿವಾಗುವುದು. ಪ್ರಜ್ಞಾ ಮಾರ್ಗದಿಂದ ಭೌತಿಕ ಪ್ರಪಂಚದ ಅರಿವಾಗುವುದು. ಈ ಮೂರೂ ಪ್ರಪಂಚಗಳನ್ನು ಬಸವಣ್ಣನವರು ಇಷ್ಟಲಿಂಗ ಮತ್ತು ಜಂಗಮಲಿಂಗದಲ್ಲಿ ಹಿಡಿದಿಟ್ಟಿದ್ದಾರೆ. ಇಷ್ಟಲಿಂಗ ಪೂಜೆ ನಮ್ಮನ್ನು ಸಮಾಧಿ ಸ್ಥಿತಿಗೆ ಒಯ್ಯಬೇಕು. ಕಾಯಕ ಮತ್ತು ದಾಸೋಹದ ಮೂಲಕ ಭೌತಿಕ ಪ್ರಜ್ಞೆಯನ್ನು ಹೊಂದಬೇಕು. ಇದಕ್ಕೆ ಜಂಗಮಲಿಂಗ ಪೂಜೆ ಎನ್ನುತ್ತಾರೆ. ಸಮಾಜಸೇವೆಯ ಧಾರ್ಮಿಕ ಪರಿಭಾಷೆ ಇದು.

ಸಮಾಧಿ ಸ್ಥಿತಿಯಿಂದ ಬರುವ ಆಧ್ಯಾತ್ಮಿಕ ಮತ್ತು ಭಾವನಾಪ್ರಪಂಚಗಳ ಅನುಭಾವದೊಂದಿಗೆ ಭೌತಿಕ ಪ್ರಪಂಚದಲ್ಲಿ ವ್ಯವಹರಿಸಬೇಕು. ಸಮಾಧಿ ಸ್ಥಿತಿಯಲ್ಲಿ ಪಡೆದುಕೊಂಡ ಸತ್ಯ, ಸಹಜ, ಸದ್ಭಾವ ಮತ್ತು ಸದ್ವರ್ತನೆಗಳು ದಾಸೋಹಂಭಾವದ ಮೂಲಕ ಭೌತಿಕ ಪ್ರಪಂಚದಲ್ಲಿ ಕ್ರಿಯಾರೂಪ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಪೂಜಾರ್ಹವಾದ ಇಷ್ಟಲಿಂಗವು ಮೆಳೆಯೊಳಗೆ ಸಿಕ್ಕಿದ ಕಲ್ಲಿನಂತಾಗುವುದು ಎಂದು ಬಸವಣ್ಣನವರು ಹೇಳಿದ್ದಾರೆ.

ನಾವು ಒಳಗಿನ ಲೋಕವನ್ನು ಅರ್ಥಮಾಡಿಕೊಳ್ಳದೆ ಹೊರಗಿನ ಲೋಕದ ಬದುಕನ್ನು ಅರ್ಥಪೂರ್ಣಗೊಳಿಸಲಿಕ್ಕಾಗದು. ಇಂಥ ಒಳಗಿನ ಲೋಕಕ್ಕೆ ಹೋಗುವ ಸಾಮರ್ಥ್ಯವನ್ನು ಮಾನವ ಮಾತ್ರ ಹೊಂದಿದ್ದಾನೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಮಾನವನಿಗೆ ಅತಿ ಹತ್ತಿರವಿರುವ ಪ್ರಾಣಿ ಎಂದರೆ ವಾನರ. ವಾನರ ಕೂಡ ತನ್ನ ಒಳಗಿನ ಲೋಕಕ್ಕೆ ಹೋಗಲು ಸಾಧ್ಯವಿಲ್ಲ. ಬಾಹ್ಯಪ್ರಪಂಚದಲ್ಲಿ ತಮ್ಮ ಮೇಲೆ ಹಲ್ಲೆಗಳಾಗಬಹುದು ಎಂಬ ಜಾಗೃತ ಭಾವದಿಂದಲೇ ವಾನರ ಮೊದಲುಗೊಂಡು ಎಲ್ಲ ಪ್ರಾಣಿಗಳು ಬದುಕುತ್ತವೆ. ಆದರೆ ಮಾನವ ಮಾತ್ರ ಧ್ಯಾನಸ್ಥನಾಗಿ ಸಮಾಧಿ ಸ್ಥಿತಿಯನ್ನೂ ತಲುಪಬಲ್ಲ. ಬಾಹ್ಯ ಪ್ರಪಂಚದಲ್ಲಿ ಪ್ರಜ್ಞಾವಂತನಾಗಿಯೂ ಬದುಕಬಲ್ಲ. ಹೀಗೆ ಧ್ಯಾನ ಮತ್ತು ಪ್ರಜ್ಞೆಯಿಂದ ಬದುಕು ಪರಿಪೂರ್ಣಗೊಳ್ಳುತ್ತದೆ.

 ಮಾನವ ಒಳಜಗತ್ತಿನ ಸಮಾಧಿ ಸ್ಥಿತಿಯನ್ನು ಮತ್ತು ಹೊರಜಗತ್ತಿನ ಜಾಗೃತ ಅವಸ್ಥೆಯನ್ನು ಏಕಕಾಲಕ್ಕೆ ಹೊಂದುವುದಕ್ಕೆ ಅಲ್ಡಸ್ ಹಕ್ಸ್ಲೆ ‘ದಿ ಸೆಲ್ಫ್ ಆ್ಯಂಡ್ ದಿ ಅದರ್’ ಎಂದು ಕರೆದಿದ್ದಾರೆ.

 ಮಾನವರು ಸಮಾಧಿ ಸ್ಥಿತಿಯನ್ನು ಹೊಂದಿ ತಮ್ಮ ಒಳಜಗತ್ತನ್ನು ಪ್ರವೇಶಿಸುವುದಕ್ಕಾಗಿಯೇ ಇಷ್ಟಲಿಂಗವಿದೆ. ಹಾಗೆ ಒಳಜಗತ್ತನ್ನು ಪ್ರವೇಶಿಸುವುದರ ಮೂಲಕ ಪಡೆದುಕೊಳ್ಳುವ ಸತ್ಯ, ಸಹಜ, ಸದ್ಭಾವ ಮತ್ತು ಸದ್ವರ್ತನೆಯ ಗುಣಗಳಿಂದ ದಾಸೋಹಂಭಾವವೆಂಬ ವಿಶಾಲ ಮನೋಭಾವವನ್ನು ಹೊಂದುವುದರ ಮೂಲಕ ಹೊರಜಗತ್ತಿನಲ್ಲಿ ಸೇವಾಧರ್ಮವನ್ನು ಪಾಲಿಸುವುದು ಲಿಂಗವಂತನ ಆದ್ಯ ಕರ್ತವ್ಯವಾಗಿದೆ. ಹೀಗೆ ಬಸವಧರ್ಮದಲ್ಲಿ ಇಷ್ಟಲಿಂಗವು ಮಹತ್ವದ ಪಾತ್ರವನ್ನು ವಹಿಸುವುದು. ಬಸವಧರ್ಮದ ಇಷ್ಟಲಿಂಗವು ಬಹದೊಡ್ಡ ಕ್ರಾಂತಿಕಾರಿ ಪರಿಕಲ್ಪನೆಯಾಗಿದೆ. ಅರುಹಿನ ಕುರುಹು ಆಗಿರುವ ಅದು ಜಾತಿ, ಮತ, ಪಂಥ, ವರ್ಣ, ವರ್ಗ ಮತ್ತು ಲಿಂಗಭೇದಗಳಿಂದ ಮಾನವಜನಾಂಗವನ್ನು ವಿಮೋಚನೆಗೊಳಿಸುವ ತತ್ತ್ವವನ್ನು ಹೊಂದಿದೆ. ಅದು ಯಜ್ಞ, ಯಾಗ, ಹೋಮ ಮತ್ತು ಅವುಗಳಿಗೆ ಸಂಬಂಧಿಸಿದ ನೇಮ, ಜಪ, ತಪಗಳನ್ನು ವಿರೋಧಿಸುತ್ತದೆ. ಕರ್ಮಸಿದ್ಧಾಂತಕ್ಕೆ ಕಡಿವಾಣ ಹಾಕುತ್ತದೆ. ದೇವಾಲಯ ಸಂಸ್ಕೃತಿಯನ್ನು ತಿರಸ್ಕರಿಸುತ್ತದೆ. ಮೂರ್ತಿಪೂಜೆಯನ್ನು ಅಲ್ಲಗಳೆಯುತ್ತದೆ. ಅಸ್ಪಶ್ಯತೆಯನ್ನು ಹೋಗಲಾಡಿಸುತ್ತದೆ. ಜನನ ಸೂತಕ, ಕುಲಸೂತಕ, ರಜಃಸೂತಕ, ಎಂಜಲಸೂತಕ, ಪ್ರೇತಸೂತಕಗಳು ಅರ್ಥಹೀನ ಎಂದು ಸಾರುತ್ತದೆ. ಗ್ರಹಣ, ಸಂಕ್ರಾಂತಿ, ತಿಥಿ, ಏಕಾದಶಿ, ಅಷ್ಟಮಿ, ನವಮಿ ಎಂಬ ಕಲ್ಪಿತಗಳನ್ನು ಮಾನವರಿಂದ ದೂರ ಸರಿಸುತ್ತದೆ. ಮಾನವರ ಮೆದುಳನ್ನು ಇಂಥ ಮಾನಸಿಕ ಸಂಕೋಲೆಗಳಿಂದ ಬಂಧಿಸುವುದರ ಬಗ್ಗೆ ಎಚ್ಚರಿಸುತ್ತದೆ. ದುಡಿಯುವ ವರ್ಗವನ್ನು ಶೋಷಣೆಗೆ ಒಳಗಾಗುವಂತೆ ಮಾಡುವ ಮನುಧರ್ಮವನ್ನೇ ಇಷ್ಟಲಿಂಗವು ಸೂತಕ ಎಂದು ಭಾವಿಸುತ್ತದೆ. ಮಾನವ ಜನಾಂಗವನ್ನು ಬೌದ್ಧಿಕ ಗುಲಾಮಗಿರಿಯಿಂದ ಪಾರು ಮಾಡುತ್ತದೆ. ಮೂಢನಂಬಿಕೆ ಮತ್ತು ತಾರತಮ್ಯಗಳನ್ನು ಪ್ರತಿಪಾದಿಸುವ ವೇದ, ಶಾಸ್ತ್ರ, ತರ್ಕ, ಆಗಮಗಳಿಗೆ ಅದು ಸವಾಲು ಹಾಕುತ್ತದೆ.

 ಈ ಕಾರಣಕ್ಕಾಗಿಯೆ ಅಸ್ಪಶ್ಯರು ಮೊದಲುಗೊಂಡು ಬಹುಪಾಲು ಕಾಯಕಜೀವಿಗಳು ಇಷ್ಟಲಿಂಗವನ್ನು ತಮ್ಮ ಎದೆಯ ಮೇಲೆ ಕಟ್ಟಿಕೊಂಡು ನಡೆದಾಡುವ ದೇವಾಲಯಗಳೇ ಆದರು. ದೇವಾಲಯದ ಹಂಬಲವನ್ನು ಕಳೆದುಕೊಂಡರು. ಅಲ್ಲಿ ಬಿಟ್ಟಿಕೆಲಸಗಳನ್ನು ಮಾಡುವುದನ್ನು ನಿಲ್ಲಿಸಿದರು. ಪೂಜಾರಿಗಳ ಮಧ್ಯಸ್ಥಿಕೆಯಿಂದ ಹೊರಬಂದು ಇಷ್ಟಲಿಂಗದ ಮೂಲಕ ತಮ್ಮಿಳಗಿನ ದೇವರ ಜೊತೆ ಭಾವೈಕ್ಯ ಸಾಧಿಸಿದರು. ಯಾರ ಎದೆಯ ಮೇಲೆ ಲಿಂಗವಿದೆಯೊ ಅವರ ಪೂರ್ವಜರು ಎಲ್ಲ ಸಂಕೋಲೆಗಳನ್ನು ಕಿತ್ತೊಗೆದು ಮಾನವೀಯತೆಯನ್ನು ಅಪ್ಪಿಕೊಂಡ ಶೂರ ಜನಾಂಗ ಎಂಬುದನ್ನು ಮರೆಯಬಾರದು. ಒಂದು ವೇಳೆ ಹೀಗೆ ಇಷ್ಟಲಿಂಗದಿಂದ ಪರಿವರ್ತನೆಯಾಗದೆ ಕೇವಲ ಲಿಂಗ ಧರಿಸುವುದನ್ನು ಬಸವಣ್ಣನವರು ಟೀಕಿಸುತ್ತಾರೆ.

***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News