ಬಂಧಿತ ಶಂಕಿತ ಉಗ್ರರಿಗೆ ಅಹ್ಮದ್ ಪಟೇಲ್ ಜತೆ ನಂಟಿದೆ ಎಂದ ಗುಜರಾತ್ ಸಿಎಂ!

Update: 2017-10-28 06:27 GMT

ಹೊಸದಿಲ್ಲಿ, ಅ.28: ಇತ್ತೀಚೆಗೆ ಬಂಧಿಸಲ್ಪಟ್ಟ ಇಬ್ಬರು ಶಂಕಿತ ಉಗ್ರರಲ್ಲೊಬ್ಬ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಟ್ರಸ್ಟಿಯಾಗಿದ್ದ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಆರೋಪಿಸಿದ್ದಾರೆ. ಇದೊಂದು ಗಂಭೀರ ಪ್ರಕರಣ, ಉಗ್ರನನ್ನು ಪಟೇಲ್ ಅವರ ಆಸ್ಪತ್ರೆಯಿಂದ ಬಂಧಿಸಲಾಗಿದೆ’’ ಎಂದು ರೂಪಾನಿ ಹೇಳಿದ್ದಾರಲ್ಲದೆ ಅಹ್ಮದ್ ಪಟೇಲ್ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕೆಂದೂ ಆಗ್ರಹಿಸಿದ್ದಾರೆ.

ಉಗ್ರರ ಬಂಧನವಾದ ಮೂರು ದಿನಗಳ ತರುವಾಯ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೂಪಾನಿ ‘‘ಈ ಇಬ್ಬರು ಉಗ್ರರನ್ನು ಬಂಧಿಸದೇ ಇರುತ್ತಿದ್ದರೆ ಏನಾಗುತ್ತಿತ್ತು ಎಂದು ಊಹಿಸಿ. ಈ ವಿಚಾರದಲ್ಲಿ ಪಟೇಲ್, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಶುದ್ಧವಾಗಿ ಹೊರಹೊಮ್ಮಬೇಕು’’ ಎಂದು ಹೇಳಿದರು.

ಅಹ್ಮದ್ ಪಟೇಲ್ ಈ ಆರೋಪವನ್ನು ನಿರಾಕರಿಸಿದ್ದಾರೆ. ಸರಕಾರ ಶಂಕಿತ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದರಲ್ಲದೆ, ಗುಜರಾತ್ ಮುಖ್ಯಮಂತ್ರಿ ರೂಪಾನಿ ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಮತದಾರರನ್ನು ಧ್ರುವೀಕರಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ‘‘ಉಗ್ರವಾದದ ವಿರುದ್ಧದ ಹೋರಾಟದಲ್ಲಿ ನಾವು ಶಾಂತಿ ಪ್ರಿಯ ಗುಜರಾತಿಗಳನ್ನು ವಿಭಜಿಸದಿರೋಣ’’ ಎಂದು ಅವರು ತಿಳಿಸಿದ್ದಾರೆ.

ಈ ಆರೋಪ ಮಾಡುವ ಮೂಲಕ ಮುಖ್ಯಮಂತ್ರಿ ಅಭಿವೃದ್ಧಿ ವಿಚಾರಗಳಿಂದ ಜನರ ಗಮನವನ್ನು ಸುರಕ್ಷತೆಯ ವಿಚಾರಗಳತ್ತ ಹರಿಸಲು ಯತ್ನಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಅಹ್ಮದಾಬಾದ್ ನಗರದಲ್ಲಿರುವ ಯಹೂದ್ಯರ ಪ್ರಾರ್ಥನಾ ಸ್ಥಳವೊಂದರ ಮೇಲೆ ದಾಳಿ ನಡೆಸುವ ಸಂಚು ಹೂಡಿದ ಆರೋಪದ ಮೇಲೆ ಗುಜರಾತ್ ರಾಜ್ಯದ ಉಗ್ರ ನಿಗ್ರಹ ಪಡೆ ಕಾಸಿಂ ಸ್ಟಿಂರ್ಬೆವಾಲ ಹಾಗೂ ಉಬೇದ್ ಬೇಗ್ ಎಂಬವರನ್ನು ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News