ಮಥುರಾ, ಬರ್ಸಾನ ‘ಪವಿತ್ರ ತೀರ್ಥ ಸ್ಥಳ’: ಮದ್ಯ, ಮಾಂಸದಂಗಡಿಗಳಿಗೆ ನಿಷೇಧ

Update: 2017-10-28 06:47 GMT

ಲಕ್ನೋ, ಅ.28: ಉತ್ತರ ಪ್ರದೇಶ ಸರಕಾರವು ಮಥುರಾ ಮತ್ತು ನೆರೆಯ ಬರ್ಸಾನ ಅನ್ನು 'ಪವಿತ್ರ ತೀರ್ಥ ಸ್ಥಳ' ಎಂದು ಪರಿಗಣಿಸಿ ಅಧಿಸೂಚನೆ ಹೊರಡಿಸಿದೆ. ಈ ಎರಡು ಪ್ರದೇಶಗಳಲ್ಲಿ ಮದ್ಯ ಮತ್ತು ಮಾಂಸದಂಗಡಿಗಳನ್ನು ಕೂಡಲೇ ನಿಷೇಧಿಸಲಾಗುವುದೆಂದೂ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

‘‘ಮಥುರಾದ ವೃಂದಾವನ ಪ್ರದೇಶವು ಶ್ರೀ ಕೃಷ್ಣ ಮತ್ತಾತನ ಹಿರಿಯ ಸಹೋದರ ಬಲರಾಮನ ಜನ್ಮ ಸ್ಥಳ ಎಂದು ಪ್ರಸಿದ್ಧವಾಗಿದೆ. ಬರ್ಸಾನ ರಾಧೆಯ ಜನ್ಮಸ್ಥಳವಾಗಿದೆ. ಈ ಎರಡೂ ಸ್ಥಳಗಳಿಗೆ ಲಕ್ಷಗಟ್ಟಲೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಅವರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಇವುಗಳನ್ನು ಪವಿತ್ರ ಸ್ಥಳಗಳೆಂದು ಗುರುತಿಸಲಾಗಿದೆ’’ ಎಂದು ಸರಕಾರದ ಅಧಿಸೂಚನೆ ತಿಳಿಸಿದೆ.

ಈ ಹಿಂದೆ ಇಂತಹುದೇ ಒಂದು ಆದೇಶ ಹರಿದ್ವಾರದಲ್ಲೂ ಜಾರಿಯಾಗಿತ್ತು ಎಂದು ಧಾರ್ಮಿಕ ವ್ಯವಹಾರಗಳ ಮುಖ್ಯ ಕಾರ್ಯದರ್ಶಿ ಅವಿನಿಶ್ ಕುಮಾರ್ ಅವಸ್ಥಿ ತಿಳಿಸಿದ್ದಾರೆ.

ಮಥುರಾ ಮತ್ತು ಬರ್ಸಾನ ಪಟ್ಟಣಗಳನ್ನು ಪವಿತ್ರ ಸ್ಥಳವೆಂದು ಈಗ ಘೋಷಿಸಿರುವುದರಿಂದ ಸರಕಾರದ ಆದೇಶವನ್ನು ಜಾರಿಗೆ ತರಲು ನಗರಾಭಿವೃದ್ಧಿ, ಅಬಕಾರಿ, ಆಹಾರ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ. ರಾಜ್ಯ ಸರಕಾರವು ವೃಂದಾವನ ನಗರ ಪಂಚಾಯತ್ ಅನ್ನು ಮಥುರಾ ಮುನಿಸಿಪಲ್ ಬೋರ್ಡ್ ಜತೆಗೆ ವಿಲೀನಗೊಳಿಸಿ ಮಥುರಾ ಮುನಿಸಿಪಲ್ ಕಾರ್ಪೊರೇಶನ್ ರಚಿಸಿದೆ. ಮುಂದಿನ ತಿಂಗಳು ನಡೆಯುವ ಮುನಿಸಿಪಲ್ ಚುನಾವಣೆಯ ದೃಷ್ಟಿಯಿಂದ ಸರಕಾರದ ಲೇಟೆಸ್ಟ್ ಆದೇಶ ಹೊರಬಿದ್ದಿದೆಯೆಂದು ಹಲವರು ಹೇಳಲಾರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News