ಪ್ರತ್ಯೇಕ ಅಕ್ರಮ ಮದ್ಯ ಮಾರಾಟ ಪ್ರಕರಣ: ಇಬ್ಬರ ಬಂಧನ
ಮೈಸೂರು, ಅ.28: ಸರಸ್ವತಿಪುರಂ, ಸಾಹುಕಾರ್ ಚೆನ್ನಯ್ಯ ರಸ್ತೆ, ಆರ್.ಆರ್. ವೈನ್ಸ್ ನ ಮುಂಭಾಗದ ಫುಟ್‍ಪಾತ್‍ನಲ್ಲಿ ಯಾವುದೇ ಲೈಸನ್ಸ್ ಇಲ್ಲದೇ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮೈಸೂರು ನಗರ ಸಿಸಿಬಿ ಪೊಲೀಸರು ಅ.26 ರಂದು ಬಂಧಿಸಿದ್ದಾರೆ.
ಜಯಶಂಕರ್ (22 ವರ್ಷ) ಬಂಧಿತ ವ್ಯಕ್ತಿಯಾಗಿದ್ದು, ಆರ್.ಆರ್.ವೈನ್ಸ್ ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದು, ಈತ ನಂಜನಗೂಡು ತಾಲೂಕು ಹರದನಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
ಈತನನ್ನು ಬಂಧಿಸಿ ವಿಚಾರಿಸಿದಾಗ ಆರ್.ಆರ್. ವೈನ್ಸ್‍ನ ಮಾಲೀಕರಾದ ನಾಗರಾಜು ಎಂಬುವವರು ಮದ್ಯವನ್ನು ಈ ರೀತಿ ಮಾರಾಟ ಮಾಡಲು ಹೇಳಿದ್ದಾಗಿ ತಿಳಿಸಿದ್ದಾನೆ. ಆರೋಪಿಯ ಬಳಿ ಇದ್ದ 1940 ರೂ. ಬೆಲೆಯ ಮದ್ಯದ 42 ವಿವಿಧ ಕಂಪೆನಿಗಳ ಟೆಟ್ರಾ ಪ್ಯಾಕ್ ಮದ್ಯ ಹಾಗೂ ಮದ್ಯ ಮಾರಾಟ ಮಾಡಿ ಸಂಪಾದನೆ ಮಾಡಿದ್ದ ಹಣ 2050 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಸಿ.ಸಿ.ಬಿ. ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈನ್ಸ್ ಶಾಪ್ ಮಾಲೀಕ ನಾಗರಾಜು ತಲೆಮರೆಸಿಕೊಂಡಿದ್ದು, ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಅ.26ರಂದು ನಡೆಸಿದ ಬೋಗಾದಿ ರಿಂಗ್ ರಸ್ತೆ, ಸಪ್ತಗಿರಿ ವೈನ್ಸ್ ಮುಂಭಾಗದ ಫುಟ್‍ಪಾತ್‍ನಲ್ಲಿ ಯಾವುದೇ ರಹದಾರಿ ಇಲ್ಲದೇ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ವಿನಯ್ ಎಂಬ ವ್ಯಕ್ತಿಯನ್ನು (23 ವರ್ಷ) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತ ಬೊಗಾದಿಯಲ್ಲಿರುವ ಸಪ್ತಗಿರಿ ವೈನ್ಸ್ ಅಲ್ಲಿ ಕ್ಯಾಷಿಯರ್ ಆಗಿದ್ದಾನೆ ಎಂದು ತಿಳಿದು ಬಂದಿದ್ದು, ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಈರೋಟ್ಟಿ ಗ್ರಾಮದ ಮೂಲದವನು ಎಂದು ತಿಳಿದು ಬಂದಿದೆ.
ಈತನಿಂದ 5 ಸಾವಿರ ರೂ ಬೆಲೆಯ ವಿವಿಧ ಕಂಪನಿಗಳ ಮದ್ಯದ 139 ಟೆಟ್ರಾ ಪ್ಯಾಕ್‍ಗಳು ಹಾಗೂ ಮದ್ಯ ಮಾರಾಟ ಮಾಡಿ ಸಂಪಾದನೆ ಮಾಡಿದ್ದ ರೂ. 2200 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಸಪ್ತಗಿರಿ ವೈನ್ಸ್‍ನ ಮಾಲೀಕರಾದ ರಾಜು ಎಂಬುವವರು ಈ ರೀತಿಯಾಗಿ ಮದ್ಯವನ್ನು ಮಾರಾಟ ಮಾಡಲು ಹೇಳಿದ್ದಾರೆ ಎಂದು ಈತ ವಿಚಾರಣೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಸಿಸಿಬಿ ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ವೈನ್ಸ್ ಶಾಪ್ ಮಾಲೀಕ ರಾಜು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.
ಸಿಸಿಬಿ ಎಸಿಪಿ ಸಿ.ಗೋಪಾಲ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ ಸ್ಪೆಪೆಕ್ಟರ್ ಎನ್.ಜಿ. ಕೃಷ್ಣಪ್ಪ ಹಾಗೂ ಎಎಸ್‍ಐ ಎಲ್.ಸುಭಾಷ್‍ಚಂದ್ರ, ಸಿಬ್ಬಂದಿ ನಟರಾಜು, ಕರುಣಾಕರ್, ರವಿಕುಮಾರ್, ನಿರಂಜನ್ ರಾಜೇಶ್ ಪಾಲ್ಗೊಂಡಿದ್ದರು.