ಕದ್ದ ವಸ್ತುಗಳ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ
ಮೈಸೂರು, ಅ.28: ಬಾತ್ ರೂಂ ಮತ್ತು ಕಿಟಕಿ ಬಾಗಿಲುಗಳಿಗೆ ಅಳವಡಿಸುವ ವಿವಿಧ ಸ್ಟೀಲ್ ಮತ್ತು ಹಿತ್ತಾಳೆ ಪದಾರ್ಥಗಳನ್ನು ಕದ್ದು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೊಹಮ್ಮದ್ ಝಾಕೀರ್ ಬಿನ್ ಮೊಹಮದ್ ಶಂಸುಲ್ಲಾ (21) ಮತ್ತು ಮೊಹಮ್ಮದ್ ಆಖೀಬ್ ಬಿನ್ ಮೊಹಮ್ಮದ್ ಇನಾಯತುಲ್ಲಾ (19) ಎಂಬ ವ್ಯಕ್ತಿಗಳನ್ನು ಮೈಸೂರು ನಗರ ನಜರ್‍ಬಾದ್ ಪೊಲೀಸರು ಅ.26 ರಂದು ರಾತ್ರಿ ಬಂಧಿಸಿದ್ದಾರೆ.
ಗಾಯಿತ್ರಿಪುರಂ ಚರ್ಚ್ ರಸ್ತೆಯ ಜಬ್ಬರ್ ರವರ ಗುಜುರಿ ಬಳಿ ನಡೆಸಿದ ಕಾರ್ಯಚರಣೆಯಲ್ಲಿ ಕದ್ದ ಮಾಲುಗಳ ಸಮೇತ ಇವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು.
ಈ ವೇಳೆ ಆರೋಪಿ ಮೊಹಮ್ಮದ್ ಝಾಕೀರ್ ಗಾಯಿತ್ರಿಪುರಂನ 4ನೆ ಕ್ರಾಸ್‍ನಲ್ಲಿ ಹೊಸದಾಗಿ ನಿರ್ಮಿಸಿದ್ದ ತಾನು ಪೇಯಿಂಟ್ ಕೆಲಸ ಮಾಡುತ್ತಿದ್ದ ಮನೆಯೊಂದರಲ್ಲಿ ಅ.25ರಂದು ರಂದು ರಾತ್ರಿ ಮೊಹಮ್ಮದ್ ಅಖೀಬ್ ಜೊತೆ ಸೇರಿಕೊಂಡು ಮನೆಯ ಬಾತ್‍ರೂಂ ಮತ್ತು ಕಿಟಕಿ ಬಾಗಿಲುಗಳಿಗೆ ಅಳವಡಿಸುವ ಸ್ಟೀಲ್ ಮತ್ತು ಹಿತ್ತಾಳೆ ಪದಾರ್ಥಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಆರೋಪಿಗಳಿಂದ 40 ಸಾವಿರ ರೂ ಮೌಲ್ಯದ ಬಾತ್‍ರೂಮ್ ಮತ್ತು ಕಿಟಕಿ ಬಾಗಿಲುಗಳಿಗೆ ಅಳವಡಿಸುವ ಸ್ಟೀಲ್ ಮತ್ತು ಹಿತ್ತಾಳೆ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.
21 ವರ್ಷದ ಮೊಹಮದ್ ಶಾಂತಿನಗರದ ಬೀಡಿ ಕಾಲೋನಿ ನಿವಾಸಿಯಾಗಿದ್ದು, ಮತ್ತೋರ್ವ 19 ವರ್ಷದ ಮೊಹಮದ್ ಶಾಂತಿನಗರ ನಿವಾಸಿ ಎಂದು ತಿಳಿದು ಬಂದಿದೆ.
ದೇವರಾಜ ವಿಭಾಗದ ಎಸಿಪಿ ಬಿ.ಎಸ್. ರಾಜಶೇಖರ್ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ನಜರ್ಬಾದ್ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಪೆಕ್ಟರ್ ಎಂ.ಎಲ್. ಶೇಖರ್, ಎಎಸ್ಸೈ ಪಿ.ಡಿ ಪೂಣಚ್ಚ ಹಾಗೂ ಸಿಬ್ಬಂದಿ ಎಚ್.ವಿ.ಮಧುಕೇಶ್, ಬಿ.ವಿ.ಪ್ರಕಾಶ್, ವಿ.ಶ್ರೀನಿವಾಸ್, ಚೇತನ್.ಎಚ್.ಎಸ್ ಪಾಲ್ಗೊಂಡಿದ್ದರು.