ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಆಮ್ ಆದ್ಮಿ ಆಗ್ರಹ
ಬೆಂಗಳೂರು, ಅ.28: ಪೊಲೀಸ್ ಅಧಿಕಾರಿ ಎಂ.ಕೆ.ಗಣಪತಿ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್‌ರನ್ನು ಆರೋಪಿ ನಂ.1 ಎಂದು ಗುರುತಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಸಹ ಸಂಚಾಲಕ ಮೋಹನ ದಾಸರಿ, ಹಿರಿಯ ಅಧಿಕಾರಿಗಳ ಕಿರುಕುಳ ಮತ್ತು ಸಚಿವರ ಅತೀವ ಒತ್ತಡ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ಎಫ್‌ಐಆರ್‌ನಲ್ಲಿ ದಾಖಲಿಸಿದ್ದು, ಸಚಿವ ಜಾರ್ಜ್‌ರನ್ನು ಆರೋಪಿ ನಂ.1 ಎಂದು ಸೂಚಿಸಲಾಗಿದೆ. ಹೀಗಾಗಿ, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಒಂದು ಬಾರಿ ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆಸಿ ಆರೋಪದಿಂದ ಮುಕ್ತರಾಗಲು ಬಯಸಿದ್ದರು. ಅಷ್ಟೇ ಅಲ್ಲದೆ, ಮತ್ತೊಂದು ಬಾರಿ ಸಚಿವ ಸ್ಥಾನ ದಕ್ಕಿಸಿಕೊಂಡಿದ್ದರು. ಆದರೆ, ಈಗ ಆರೋಪಕ್ಕೆ ಹೊರ ತಿರುವು ಸಿಕ್ಕಿದ್ದು, ಸಿಬಿಐ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಜಾರ್ಜ್‌ರನ್ನು ರಕ್ಷಿಸಲು ಮುಂದಾಗಿದ್ದಾರೆ. ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ಸಚಿವ ಜಾರ್ಜ್‌ರನ್ನು ಸಂಪುಟದಿಂದ ವಜಾಗೊಳಿಸುವುದು ಮಾತ್ರವಲ್ಲದೆ, ಇಂತಹ ವ್ಯಕ್ತಿಗಳಿಗೆ ಮುಂಬರುವ ಚುನಾವಣೆಯಲ್ಲಿ ಹಾಗು ಅವರು ಆರೋಪ ಮುಕ್ತವಾಗುವವರೆಗೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬಾರದು ಎಂದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷದ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಬೇಸತ್ತು ಜನರು ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮಾಡಿದ ತಪ್ಪನ್ನು ಮಾಡಬಾರದು. ಒಂದು ವೇಳೆ ಅದೇ ತಪ್ಪನ್ನು ಮಾಡಿದರೆ ಮುಂದಿನ ದಿನಗಳಲ್ಲಿ ಜನ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಸಚಿವ ಕೆ.ಜೆ.ಜಾರ್ಜ್‌ರ ಕಾನೂನು ಬಾಹಿರ ಚಟುವಟಿಕೆ ವಿಷಯದಲ್ಲಿ ಗಣಪತಿಯು ಹಲವು ಮಾಹಿತಿಗಳು ಸಂಗ್ರಹ ಮಾಡಿದ್ದರು. ಅವರ ಕಂಪೆನಿಗಳ ತೆರಿಗೆ ವಿಷಯದಲ್ಲಿ ಐಎಎಸ್ ಅಧಿಕಾರಿ ಡಿ.ಕೆ.ರವಿ ತನಿಖೆಯನ್ನು ಗೃಹ ಸಚಿವರ ಅಧಿಕಾರ ಬಳಸಿ ತಡೆ ಹಿಡಿದ ಎಂಬ ಬಗ್ಗೆ ಹಲವು ಸುಳಿವುಗಳಿಗೆ. ಅವರ ಬಗ್ಗೆ ತನಿಖೆ ನಡೆಸುತ್ತಿದ್ದ ಹಿರಿಯ ಅಧಿಕಾರಿಗಳು ಸಾಕಷ್ಟು ಒತ್ತಡದಲ್ಲಿದ್ದರು ಮತ್ತು ಪ್ರಕರಣಗಳಲ್ಲಿ ಅವರ ಹೆಸರನ್ನು ದೋಷ ಮುಕ್ತಗೊಳಿಸಲು ಹಿಂದಕ್ಕೆ ಸರಿದ ಅಧಿಕಾರಿಗಳ ಜೀವವನ್ನು ತೆಗೆದರು ಎಂದ ಅವರು, ಇಂತಹ ಸಚಿವರು ರಾಜ್ಯಕ್ಕೆ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.
ಬಂಧನ ಖಂಡನೆ: ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಚಿವ ಜಾರ್ಜ್ ಕಚೇರಿಯ ಎದುರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ, ಪೊಲೀಸರು ದಬ್ಬಾಳಿಕೆ ನಡೆಸಿ ಕಾರ್ಯಕರ್ತರನ್ನು ಬಂಧನ ಮಾಡಿದ್ದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.