ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸ್ ದಾಳಿ: ಐವರ ಬಂಧನ, ಓರ್ವ ಪರಾರಿ
ಚಿಕ್ಕಮಗಳೂರು, ಅ.28: ಮಲ್ಲಂದೂರು ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಉಳುವಾಗಿಲು ಗ್ರಾಮದಲ್ಲಿ ಮಲ್ನಾಡು ಮನೆ ಎಂಬ ಹೋಂಸ್ಟೇನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಡಿಸಿಐಬಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿದ್ದ ಉಳುವಾಗಿಲು ಗ್ರಾಮದ ಕವಿತಾ(43), ಗೌರಿಕಾಲುವೆ ಬಡಾವಣೆಯ ರೀಟಾ ಅಲಿಯಾಸ್ ಅನಿತಾ(37), ಪೆನ್ಸನ್ ಮೊಹಲ್ಲಾದ ಮೈತ್ರಾ(38) ಹಾಗೂ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಹೋಂಸ್ಟೇಗೆ ಬಂದಿದ್ದ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಗೆಂಡೇಹಳ್ಳಿಯ ಗುತ್ತಿಗೆದಾರ ಸಂತೋಷ(28) ಮತ್ತು ಹಾಸನದ ಬೇಲೂರು ತಾಲೂಕಿನ ನಾಹೇನಹಳ್ಳಿ ಅಕೌಂಟೆಂಟ್ ಚಂದ್ರೇಗೌಡ(52) ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಳಿದಂತೆ 5 ಮಂದಿ ಮಹಿಳೆಯರನ್ನು ವೇಶ್ಯಾವಾಟಿಕೆಯಿಂದ ರಕ್ಷಿಸಲಾಗಿದೆ. ಇನ್ನೋರ್ವ ಆರೋಪಿ ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯ ವಿನಯ್ ನಾಯ್ಡು ತಲೆಮರೆಸಿಕೊಂಡಿದ್ದಾನೆ. ಸ್ಥಳದಲ್ಲಿ ಆರೋಪಿಗಳಿಂದ ದೊರೆತ 13 ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಉಳುವಾಗಿಲು ಗ್ರಾಮದಲ್ಲಿ ಮಲ್ನಾಡು ಮನೆ ಎಂಬ ಹೋಂಸ್ಟೇನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಪೊಲೀಸ್ ಅಧೀಕ್ಷಕರಿಗೆ ಖಚಿತ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಡಿಸಿಐಬಿ ಪೊಲೀಸರು ಮತ್ತು ಸಿಬ್ಬಂದಿ ತಂಡ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಹೋಂಸ್ಟೇ ಮೇಲೆ ದಾಳಿ ನಡೆಸಲಾಯಿತು.
ಸದರಿ ಹೋಂಸ್ಟೇನಲ್ಲಿ 5 ಮಂದಿ ಮಹಿಳೆಯರಿದ್ದರು. ಅವರನ್ನು ವಿಚಾರಿಸಿದಾಗ ಈ ಹೋಂಸ್ಟೇ ಸ್ಥಳವು ಉಳುವಾಗಿಲು ಗ್ರಾಮದ ನಾರಾಯಣಗೌಡ ಎಂಬವರಿಗೆ ಸೇರಿದ್ದೆಂದು ತಿಳಿದುಬಂದಿದೆ. ಅವರ ಪತ್ನಿ ಕವಿತಾ, ಗೌರಿ ಕಾಲುವೆಯ ರೀಟಾ ಅಲಿಯಾಸ್ ಅನಿತಾ, ಪೆನ್ಸನ್ ಮೊಹಲ್ಲಾದ ಮೈತ್ರಾ(38) ಮತ್ತು ಕೋಟೆ ಬಡಾವಣೆಯ ವಿನಯ್ ನಾಯ್ಡು ಎಂಬವರು ಸೇರಿಕೊಂಡು ಹೋಂಸ್ಟೇನಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಪತ್ತೆಯಾಗಿದೆ ಎಂದು ಎಸ್ಪಿ ಕಚೇರಿ ಪ್ರಕಟನೆ ತಿಳಿಸಿದೆ.
ಆರೋಪಿಗಳು ಚಿಕ್ಕಮಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ಯುವತಿ ಯರನ್ನು ಕರೆತಂದು ಈ ಹೋಂಸ್ಟೇನಲ್ಲಿ ವೇಶ್ಯಾವಾಟಿಕೆ ದಂಧ ನಡೆಸುತ್ತಿದ್ದರು. ಹೋಂಸ್ಟೇಗೆ ಯಾವುದೇ ರೀತಿಯ ಪರವಾನಿಗೆಯಿಲ್ಲ ಎಂದು ಪ್ರಕಟನೆ ತಿಳಿಸಿದೆ.
ಈ ಕುರಿತು ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.