×
Ad

ಕನ್ನಡೇತರ ನಾಮಫಲಕ ವಿರುದ್ಧ ಕಾರ್ಯಾಚರಣೆ: ಲೋಕೇಶ್

Update: 2017-10-28 23:25 IST

ಮಡಿಕೇರಿ, ಅ.28: ಕೊಡಗು ಜಿಲ್ಲೆಯಲ್ಲಿರುವ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳು, ಹೊಟೇಲ್, ರೆಸಾರ್ಟ್‌ಗಳಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸದಿದ್ದಲ್ಲಿ ಕನ್ನಡೇತರ ಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನವೆಂಬರ್ 2ನೆ ವಾರದಿಂದ ಆರಂಭಿಸುವುದಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಎಚ್ಚರಿಕೆ ನೀಡಿದೆ.

 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಈಗಾಗಲೇ ಪರಿಷತ್ ವತಿಯಿಂದ ಕನ್ನಡ ನಾಮಫಲಕ ಅಳವಡಿಸುವಂತೆ ಮನವಿ ಮಾಡಿಕೊಂಡಿರುವುದಲ್ಲದೆ, ಪ್ರತಿಭಟನೆಯನ್ನು ಕೂಡ ನಡೆಸಲಾಗಿದೆ. ಜಿಲ್ಲಾಧಿಕಾರಿ ಸಹ ಕನ್ನಡ ನಾಮಫಲಕ ಅಳವಡಿಸುವಂತೆ ಆದೇಶ ನೀಡಿದ್ದಾರೆ. ಆದರೆ, ಇದು ಪಾಲನೆಯಾಗುತ್ತಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನವೆಂಬರ್ ಮೊದಲ ವಾರದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಇರುವ ಕಾರಣ ಕನ್ನಡೇತರ ಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆೆಯನ್ನು ಎರಡನೆ ವಾರದಿಂದ ಆರಂಭಿಸುವುದಾಗಿ ಹೇಳಿದ ಅವರು, ಈಗಾಗಲೇ ಜಿಲ್ಲಾ ಯುವ ಒಕ್ಕೂಟ, ಕರ್ನಾಟಕ ಕಾವಲು ಪಡೆ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೊಡಗು ಲೇಖಕಿಯರ ಬಳಗ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಪರಿಷತ್‌ನ ಹೋರಾಟಕ್ಕೆ ಬೆಂಬಲ ಸೂಚಿಸಿರುತ್ತವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಅವರ ಆದೇಶಕ್ಕೆ ಕುಶಾಲನಗರದಲ್ಲಿ ಯಾವುದೇ ಸ್ಪಂದನೆ ದೊರಕಿಲ್ಲವೆಂದು ಆರೋಪಿಸಿದ ಅವರು, ರಾಜ್ಯೋತ್ಸವದ ನಂತರ ಯಾವುದೇ ಸಂದರ್ಭದಲ್ಲಿ ದಾಳಿ ನಡೆಸಿ ಕನ್ನಡೇತರ ನಾಮಫಲಕಗಳನ್ನು ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕೋಶಾಧಿಕಾರಿ ಮುರಳೀಧರ್ ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News