ಪ್ರಧಾನಿ ಮೋದಿ ಮಂಗಳೂರಿಗೆ ಆಗಮನ
ಮಂಗಳೂರು, ಅ.29: ಪ್ರಧಾನ ಮಂತ್ರಿ ನರೇಂದ್ರ ಮೋದಿ ಧರ್ಮಸ್ಥಳ, ಬೆಂಗಳೂರು ಮತ್ತು ಬೀದರ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕಾಗಿ ಮಂಗಳೂರಿಗೆ ಇಂದು ಬೆಳಗ್ಗೆ ಆಗಮಿಸಿದರು.
ಬಜ್ಪೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮೈಸೂರು ಪೇಟ ತೊಡಿಸಿ, ಗಂಧದ ಹಾರ ಹಾಕಿ ಮಂಗಳೂರಿನ ಮೇಯರ್ ಕವಿತಾ ಸನಿಲ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಅನಂತ ಕುಮಾರ್, ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಮತ್ತಿತರರು ಸ್ವಾಗತಿಸಿದರು.
ಮಂಗಳೂರು ವಿಮಾನ ನಿಲ್ದಾಣದಿಂದ ಐಎಎಫ್‌ನ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ತೆರಳಿದರು.
ಪ್ರಧಾನಿ ಮೋದಿ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥನ ದರ್ಶನ ಮಾಡಿದ ಬಳಿಕ ಉಜಿರೆಯಲ್ಲಿ ನಡೆಯಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸ್ವಸಹಾಯ ಸಂಘಗಳ 38 ಲಕ್ಷ ಸದಸ್ಯರ ಪೈಕಿ 10 ಲಕ್ಷ ಸದಸ್ಯರು ಜನಧನ್ ಖಾತೆ ಹೊಂದಿದ್ದು, ಅವರಿಗೆ ರುಪೇ ಕಾರ್ಡ್ ವಿತರಣೆ ಮಾಡುವ ಕಾರ್ಯಕ್ರಮವನ್ನು ಬೆಳಗ್ಗೆ 11.30 ಕ್ಕೆ ಮೋದಿ ಉದ್ಘಾಟಿಸುವರು.
ಉಜಿರೆಯ ಕಾರ್ಯಕ್ರಮದ ಮುಗಿದ ಬಳಿಕ ಮಧ್ಯಾಹ್ನ 2.30 ಬೆಂಗಳೂರಿಗೆ ಆಗಮಿಸಿ ಬೆಂಗಳೂರಿನ ಅರಮನೆ ಆವರಣದಲ್ಲಿಸೌಂದರ್ಯಲಹರಿ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 6.30ಕ್ಕೆ ಬೀದರ್ ನಲ್ಲಿ ಬೀದರ್ - ಕಲಬುರಗಿ ನೂತನ ರೈಲು ಮಾರ್ಗ ವನ್ನು ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ.