×
Ad

ನ.2 ರಿಂದ ರಾಜ್ಯದಲ್ಲಿ 'ಬಿಜೆಪಿ ಪರಿವರ್ತನಾ ರ್ಯಾಲಿ': ಅಶ್ವಥ ನಾರಾಯಣ

Update: 2017-10-29 17:25 IST

ತುಮಕೂರು, ಅ.29: ಮುಂಬರುವ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಂಕಲ್ಪದಂತೆ ಮಿಷನ್ 150ನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಜನರ ಮುಂದೆ ರಾಜ್ಯ ಸರಕಾರದ ವೈಫಲ್ಯ ಮತ್ತು ಕೇಂದ್ರ ಸರಕಾರ ಸಾಧನೆಗಳನ್ನು ಹೇಳುವ ಪರಿವರ್ತನಾ ರ್ಯಾಲಿ ನವೆಂಬರ್ 2 ರಿಂದ ಆರಂಭವಾಗಲಿದೆ ಎಂದು ಬಿಜೆಪಿ ವಕ್ತಾರ ಅಶ್ವಥ ನಾರಾಯಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 72 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ನವೆಂಬರ್ 2 ರಂದು ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದು, ರಾಜ್ಯದ ಉಸ್ತುವಾರಿ ಮುರುಳೀಧರ್‍ರಾವ್, ಕೇಂದ್ರ ಸರಕಾರದಲ್ಲಿರುವ ರಾಜ್ಯದ ಸಚಿವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಬೆಂಗಳೂರಿನ ಇಂಟರ್‍ ನ್ಯಾಶನಲ್ ವಸ್ತು ಪ್ರದರ್ಶನದ ಆವರಣದಲ್ಲಿ ಆರಂಭವಾಗುವ ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸಲು ರಾಜ್ಯದ 12 ಜಿಲ್ಲೆಗಳಿಂದ ಮೂರು ಲಕ್ಷಕ್ಕೂ ಅಧಿಕ ಕಾರ್ಯ ಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಉಸ್ತುವಾರಿಯನ್ನು ಮಾಜಿ ಸಚಿವ ಆರ್.ಅಶೋಕ್ ನೋಡಿಕೊಳ್ಳುತ್ತಿದ್ದು, ಸಂಸದೆ ಶೋಭಾ ಕರಂದ್ಲಾಜೆ ಪರಿವರ್ತನಾ ರ್ಯಾಲಿಯ ಸಂಚಾಲಕರಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಜೋತಿ ಗಣೇಶ್ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಈ ಪರಿವರ್ತನಾ ರ್ಯಾಲಿಯ ಉದ್ಘಾಟನೆಯ ನಂತರ ಅವರು ಮೊದಲ ಬಾರಿಗೆ ತುಮಕೂರು ಜಿಲ್ಲೆಯಿಂದ ಪ್ರವಾಸ ಆರಂಭಸಲಿದ್ದು, ಪ್ರಥಮ ಹಂತದಲ್ಲಿ ಜಿಲ್ಲೆಯ 7 ವಿಧಾನ ಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ರ್ಯಾಲಿ ಸಂಚರಿಸಲಿದೆ. ನವೆಂಬರ್ 2ರಂದು ಸಂಜೆ ಕುಣಿಗಲ್‍ನಲ್ಲಿ ಪ್ರಥಮ ಸಭೆ ನಡೆಯಲಿದೆ. ನವೆಂಬರ್ 3 ರಂದು ತುರುವೇಕೆರೆ ಮತ್ತು ಚಿಕ್ಕನಾಯ ಕನಹಳ್ಳಿ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು, ನವೆಂಬರ್ 4ರಂದು ತುಮಕೂರು ನಗರದ ಗ್ರಂಥಾಲಯದ ಆವರಣ, ಮಧ್ಯಾಹ್ನ ಗುಬ್ಬಿ ಮತ್ತು ಸಂಜೆ ತಿಪಟೂರಿನಲ್ಲಿ ಬಹಿರಂಗ ಸಮಾವೇಶದ ನಂತರ ಹಾಸನ ಜಿಲ್ಲೆಗೆ ಪ್ರಯಾಣ ಬೆಳೆಸಲಿದೆ. ರಾಜ್ಯದ ಎಲ್ಲಾ ನಾಯಕರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಎರಡನೇ ಹಂತದಲ್ಲಿ ಜಿಲ್ಲೆಯ ಉಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜನವರಿಯಲ್ಲಿ ರ್ಯಾಲಿ ಪ್ರವಾಸ ಮಾಡಲಿದೆ ಎಂದು ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆಬ್ಬಾಕ ರವಿ, ರಂಗಾನಾಯಕ್, ಮುಖಂಡರಾದ ಕೊಪ್ಪಲ್ ನಾಗರಾಜು, ರುದ್ರೇಶ್, ಡಾ.ಹುಲಿನಾಯ್ಕರ್, ಬಿ.ಎಸ್.ನಾಗಣ್ಣ, ಹಾಲೆನೂರು ಲೇಪಾಕ್ಷ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News