×
Ad

ರೈತರ ಸಾಲ ಮನ್ನಾ ಮಾಡಿಸುವಲ್ಲಿ ಬಿಜೆಪಿ ಸಂಸದರು ವಿಫಲ: ಮಧುಬಂಗಾರಪ್ಪ

Update: 2017-10-29 23:23 IST

ಸೊರಬ, ಅ.29: ಸಂಸದ ಬಿ.ಎಸ್.ಯಡಿಯೂರಪ್ಪಸೇರಿದಂತೆ ರಾಜ್ಯದ ಬಿಜೆಪಿ ಸಂಸದರು ರೈತರ ಸಂಪೂರ್ಣ ಸಾಲ ಮನ್ನಾ ಮಾಡಿಸುವಲ್ಲಿ ವಿಫಲರಾಗಿದ್ದು, ಪ್ರಧಾನಿ ಮುಂದೆ ಹಕ್ಕೊತ್ತಾಯ ಮಾಡುವ ನೈತಿಕ ಸ್ಥೈರ್ಯವನ್ನು ಕಳೆದುಕೊಂಡಿದ್ದಾರೆ ಎಂದು ಶಾಸಕ ಮಧುಬಂಗಾರಪ್ಪಲೇವಡಿ ಮಾಡಿದ್ದಾರೆ.

ಪಟ್ಟಣದ ಬಂಗಾರಧಾಮದಲ್ಲಿ ಶನಿವಾರ ಸಂಜೆ ನಡೆದ ನ.5ರಿಂದ 8ರವರೆಗೆ ತಾಲೂಕಿನ ಕುಬಟೂರಿನಿಂದ ಶಿವಮೊಗ್ಗದವರೆಗಿನ ನೀರಾವರಿ ಯೋಜನೆಗಾಗಿ ಹಮ್ಮಿಕೊಂಡಿರುವ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚೆಗೆ ರಾಜ್ಯ ಸರಕಾರ ರೈತರ 50 ಸಾವಿರ ರೂ.ವರೆಗಿನ ಸಾಲಮನ್ನಾ ಮಾಡಿದೆ. ಇನ್ನುಳಿದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಂಪೂರ್ಣ ರೈತರ ಸಾಲವನ್ನು ಕೇಂದ್ರದ ಮೇಲೆ ಒತ್ತಡ ಹೇರಿ ಸಾಲಮನ್ನಾ ಮಾಡಿಸುವಲ್ಲಿ ರಾಜ್ಯದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಸಾಕಷ್ಟು ನೀರಾವರಿ ಸಮಸ್ಯೆಗಳನ್ನು ಹೊಂದಿರುವ ಶಿಕಾರಿಪುರ ಕ್ಷೇತ್ರದಲ್ಲಿ ಗಮನಹರಿಸುವುದನ್ನು ಬಿಟ್ಟು, ಸಂಸದ ಯಡಿಯೂರಪ್ಪ, ತಾಲೂಕಿನ ಜನರನ್ನು ಮುಳುಗಿಸುವ ದಂಡಾವತಿ ಯೋಜನೆಗೆ ಮುಂದಾಗಿರುವು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

ಈ ಹಿಂದೆ ಆನವಟ್ಟಿ ಭಾಗದ ಮುಳುಗಡೆಗೆ ಮುಂದಾಗಿದ್ದ ಬ್ಯಾತನಾಳ ಯೋಜನೆಯನ್ನು ವಿರೋಧಿಸಿದ್ದ ಬಂಗಾರಪ್ಪನವರು ರೈತರ ಜಮೀನುಗಳನ್ನು ಮುಳುಗಿಸದೆ ಮೂಡಿ, ಮೂಗೂರು, ಕಚವಿ ಏತನೀರಾವರಿ ಯೋಜನೆಗಳಿಗೆ ಅಂದೇ ಮಂಜೂರು ಮಾಡಿಸಿದ್ದರು. ಈಗ ಈ ಯೋಜನೆಗಳ ಗಾತ್ರ ಹೆಚ್ಚಿಸಿ ಹಲವು ಕೆರೆಗಳನ್ನು ತುಂಬಿಸುಲು ಸುಮಾರು 45 ಕೋಟಿ ರೂ. ಆವಶ್ಯಕತೆಯಿದ್ದು, ಹಣ ಬಿಡುಗಡೆಗಾಗಿ ಸರಕಾರದ ಮೇಲೆ ಒತ್ತಡ ಹೇರುವ ದೃಷ್ಟಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪಾದಯಾತ್ರೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಭದ್ರಾವತಿ ಶಾಸಕ ಅಪ್ಪಾಜಿಗೌಡ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕಾ, ಜಿಲ್ಲಾಧ್ಯಕ್ಷ ನಿರಂಜನ್, ಶಿಕಾರಿಪುರದ ಎಚ್.ಟಿ.ಬಳಿಗಾರ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್.ಗಣಪತಿ, ಕೆ.ಪಿ.ರುದ್ರಗೌಡ, ವಕ್ತಾರ ಎಂ.ಡಿ.ಶೇಖರ್, ಜಿಪಂ ಸದಸ್ಯ ವೀರೇಶ್ ಕೊಟಗಿ, ತಾಪಂ ಉಪಾಧ್ಯಕ್ಷ ಸುರೇಶ್, ಸದಸ್ಯರಾದ ನಾಗರಾಜ್ ಚಂದ್ರಗುತ್ತಿ, ಸುನೀಲ್ ಗೌಡ, ಎಪಿಎಂಸಿ ಅಧ್ಯಕ್ಷ ರಾಜು ಕುಪ್ಪಗಡ್ಡೆ, ಉಪಾದ್ಯಕ್ಷ ಜಯಶೀಲ ಗೌಡ, ಪಪಂ ಅಧ್ಯಕ್ಷೆ ಬೀಬಿ ಝುಲೇಖಾ, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಡಿ.ಆರ್.ಶ್ರೀಧರ್, ಪ್ರಶಾಂತ್ ಮೇಸ್ತಿ, ಮಂಚಿ ಹನುಮಂತಪ್ಪ, ಮೆಹಬೂಬಿ, ನೇತ್ರಾವತಿ ಪ್ರಮುಖರಾದ ಮಂಡಗಳಲೆ ಹುಚ್ಚಪ್ಪ, ಆಶೋಕ್ ಬರದಳ್ಳಿ, ಬರಗಿ ಬಾಸ್ಕರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News