×
Ad

ಸುಂಟಿಕೊಪ್ಪ: ಕಾವೇರಿ ತಾಲೂಕಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

Update: 2017-10-29 23:35 IST

ಸುಂಟಿಕೊಪ್ಪ, ಅ.29: ಕಾವೇರಿ ತಾಲೂಕಿಗೆ ಆಗ್ರಹಿಸಿ ಕಾವೇರಿ ತಾಲೂಕು ರಚನಾ ಹೋರಾಟ ಸಮಿತಿಯ ಸುಂಟಿಕೊಪ್ಪಸ್ಥಾನೀಯ ಸಮಿತಿಯ ವತಿಯಿಂದ ರವಿವಾರ ಧರಣಿ ಸತ್ಯಾಗ್ರಹ ನಡೆಸಿ ಪಟ್ಟಣದಲ್ಲಿ ತಮಟೆ ಬಾರಿಸುವುದರೊಂದಿಗೆ ಕನ್ನಡ ವೃತ್ತದಲ್ಲಿ ಘೋಷಣೆ ಕೂಗುವುದರೊಂದಿಗೆ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಲಾಯಿತು.

ಇಲ್ಲಿನ ಕರ್ನಾಟಕ ಬ್ಯಾಂಕ್ ಶಾಖೆಯ ಆವರಣದಲ್ಲಿ ಶಾಮಿಯಾನ ನಿರ್ಮಿಸಿದ ಕಾವೇರಿ ತಾಲೂಕು ರಚನಾ ಹೋರಾಟ ಸ್ಥಾನೀಯ ಸಮಿತಿ ಸದಸ್ಯರು, ತಮಟೆ ಬಾರಿಸುತ್ತಾ ಕಾವೇರಿ ತಾಲೂಕು ಹೋರಾಟಕ್ಕೆ ಜಯವಾಗಲಿ ಎಂದು ಘೋಷಣೆ ಹಾಕಿದರು. ಆನಂತರ ಮೆರವಣಿಗೆ ಮೂಲಕ ಮುಖ್ಯ ರಸ್ತೆಯಲ್ಲಿ ತೆರಳಿ ಜಾಗೃತಿ ಮೂಡಿಸಿದರು.

ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಎಂ.ಎ.ವಸಂತ, ಮಾಜಿ ಮುಖ್ಯಮಂತ್ರಿ ದಿ. ಆರ್ ಗುಂಡೂರಾವ್ ಕುಶಾಲನಗರ ಮುಖ್ಯ ಕೇಂದ್ರವನ್ನಾಗಿಸಿಕೊಂಡು ಕಾವೇರಿ ತಾಲೂಕು ರಚಿಸಬೇಕೆಂಬ ಕನಸು ಕಂಡಿದ್ದರು. ಕಾವೇರಿ ತಾಲೂಕು ರಚನೆಯಿಂದ ಇಲ್ಲಿನ ಜನತೆಗೆ ಅನುಕೂಲವಾಗಲಿದೆ. ಕಾವೇರಿ ತಾಲೂಕು ಭೌಗೋಳಿಕ ವಿಸ್ತೀರ್ಣ ಹಾಗೂ ಜನಸಂಖ್ಯೆಯನ್ನು ಹೊಂದಿದೆ ಎಂದರು.

ಕಾವೇರಿ ತಾಲೂಕು ರಚನೆಯ ಅನಿವಾರ್ಯತೆ ಅದರಿಂದ ಜನರಿಗೆ ಆಗುವ ಉಪಯೋಗಗಳ ಬಗ್ಗೆ ಮತ್ತು ರಾಜ್ಯ ಸರಕಾರವು ಹೋರಾಟಕ್ಕೆ ಮನ್ನಣೆ ನೀಡದಿದ್ದಲ್ಲಿ ಬಹೃತ್ ಹೋರಾಟ ಸಂಘಟಿಸಲಾಗುವುದು ಎಂದು ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಕಾವೇರಿ ತಾಲೂಕು ಹೋರಾಟ ಕೇಂದ್ರ ಸಮಿತಿಯ ಸದಸ್ಯ ಡಿ ನರಸಿಂಹ ಹೇಳಿದರು.

ಮಾಜಿ ಗ್ರಾಪಂ ಅಧ್ಯಕ್ಷ ಎಂ.ಎ. ಉಸ್ಮಾನ್ ಮಾತನಾಡಿ, ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ಆಗ್ರಹಿಸಿದರು. ಕಾವೇರಿ ತಾಲೂಕು ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಯಂಕನ ಕರುಂಬಯ್ಯ ಮಾತನಾಡಿ, ಕಾವೇರಿ ತಾಲೂಕು ರಚನೆ ಬಗ್ಗೆ ಸರಕಾರದ ಗಮನ ಸೆಳೆಯಬೇಕು. ನ್ಯಾಯ ಸಿಗುವವರೆಗೆ ಹೋರಾಟ ನಡೆಸಬೇಕೆಂದರು.

ಕಾವೇರಿ ತಾಲೂಕು ರಚನಾ ಹೋರಾಟ ಸಮಿತಿಯ ಸುಂಟಿಕೊಪ್ಪಸ್ಥಾನೀಯ ಸಮಿತಿ ಅಧ್ಯಕ್ಷ ಪಿ.ಎಫ್.ಸೆಬಾಸ್ಟಿನ್, ಗ್ರಾಪಂ ಅಧ್ಯಕ್ಷೆ ರೋಸ್‌ಮೇರಿ ರಾಡ್ರಿಗಸ್, ಕೆಂದ್ರೀಯ ಸಮಿತಿ ಸದಸ್ಯರಾದ ಕೆ.ಎ.ಉಸ್ಮಾನ್ ಸುಂಟಿಕೊಪ್ಪಗ್ರಾಮಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿದರು.

ಹೋರಾಟ ಸತ್ಯಾಗ್ರಹದಲ್ಲಿ ಗ್ರಾಪಂ ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಸದಸ್ಯರಾದ ಕೆ.ಇ.ಕರೀಂ, ಬಿ.ಎಂ.ಸುರೇಶ್, ನಾಗರತ್ನಾ ಸುರೇಶ್, ರತ್ನಾ ಜಯನ್, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಸುನೀಲ್, ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಬಿ.ವಿನ್ಸೆಂಟ್, ಖಜಾಂಚಿ ಬಿ.ಕೆ.ಶಶಿಕುಮಾರ್ ರೈ, ವಹೀದ್‌ಜಾನ್, ಕರವೇ ಹೋಬಳಿ ಅಧ್ಯಕ್ಷ ನಾಗೇಶ್ ಪೂಜಾರಿ, ನಮ್ಮ ಸುಂಟಿಕೊಪ್ಪ ಬಳಗದ ಸದಸ್ಯರಾದ ರಂಜೀತ್, ಜಾಹಿದ್ ಅಹ್ಮದ್, ಡೆನ್ನಿಸ್ ಡಿಸೋಜ, ಕೆ.ಎಸ್.ಅನಿಲ್, ಕಾವೇರಿ ತಾಲೂಕು ಹೋರಾಟ ಸಮಿತಿ, ಸು.ಗ್ರಾ.ಅ.ಹೋ ಸಮಿತಿ, ಲಕ್ಷ್ಮೀ ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳು, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News